ಗೌರಿ ಹತ್ಯೆ ವಿರೋಧಿ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ನಿನ್ನೆ ನಗರದಲ್ಲಿ ನಡೆದ ಪ್ರತಿಭಟನೆ
ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಹಂತಕರ ಸುಳಿವನ್ನು ಪಡೆಯುವಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ.
ಹತ್ಯೆ ನಡೆದು ಮೂರು ತಿಂಗಳುಗಳೇ ಕಳೆದರೂ ಕೂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಗೌರಿ ಹತ್ಯೆ ವಿರೋಧಿ ವೇದಿಕೆ ಕಾರ್ಯಕರ್ತರು ನಿನ್ನೆ ನಗರದ ಮೌರ್ಯ ಸರ್ಕಲ್ ನಿಂದ ಮುಖ್ಯಮಂತ್ರಿ ನಿವಾಸಕ್ಕೆ ಪ್ರತಿಭಟನಾ ರ್ಯಾಲಿ ಮೂಲಕ ಸಾಗಿ ತನಿಖೆಯಲ್ಲಿ ವಿಳಂಬವನ್ನು ಖಂಡಿಸಿದರು.
ಗೌರಿ ಹತ್ಯೆ ವಿರೋಧಿ ವೇದಿಕೆ ಕಾರ್ಯಕರ್ತರು ಮುಖ್ಯಮಂತ್ರಿಯ ನಿವಾಸಕ್ಕೆ ಪ್ರವೇಶಿಸಿ ತಮ್ಮ ಒತ್ತಾಯವನ್ನು ಮಂಡಿಸಲು ಮುಂದಾದಾಗ ಪೊಲೀಸರು ಅವರನ್ನು ತಡೆದರು. ಕಳೆದ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಹತ್ಯೆಗೀಡಾಗಿದ್ದರು.
ಪ್ರತಿಭಟನಾ ರ್ಯಾಲಿಗೆ ಮುನ್ನ ಮಾತನಾಡಿದ ಸಾಹಿತಿ ಚಂದ್ರಶೇಖರ್ ಪಾಟೀಲ್, ಹಂತಕರನ್ನು ಪತ್ತೆಹಚ್ಚಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನು ಟೀಕಿಸಿದರು.
ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿದರೂ ಕೂಡ ಯಾವುದೇ ಪ್ರಗತಿಯ ಫಲಿತಾಂಶ ಸಿಕ್ಕಿದಂತೆ ಕಂಡುಬರುತ್ತಿಲ್ಲ. ಹತ್ಯೆಯ ಹಿಂದಿನ ಶಕ್ತಿಗಳನ್ನು ಗುರುತಿಸಿ ಬಹಿರಂಗಪಡಿಸಬೇಕಿದೆ. ಗೌರಿ ಲಂಕೇಶ್ ಹತ್ಯೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡಿಸಲಾಗಿದೆ.ಕೇಸಿನಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲದಿದ್ದು ತನಿಖೆಯನ್ನು ತ್ವರಿತಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಚಂದ್ರಶೇಖರ್ ಪಾಟೀಲ್ ಹೇಳಿದರು.
ಗೌರಿ ಲಂಕೇಶ್ ಹತ್ಯೆಯ ಕೇಸಿನ ವಿಚಾರಣೆ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ವಿಶೇಷ ತನಿಖಾ ತಂಡದ ಅಧಿಕಾರಿಯೊಬ್ಬರು, ಆರೋಪಿಗಳನ್ನು ಗುರುತಿಸುವ ಅಂತಿಮ ಹಂತಕ್ಕೆ ತಲುಪಿದ್ದೇವೆ. ಕೇಸಿಗೆ ಸಂಬಂಧಪಟ್ಟಂತೆ ಹಲವು ಶಂಕಿತರನ್ನು ವಿಚಾರಣೆ ನಡೆಸಲಾಗಿದೆ. ಆದರೆ ಯಾವುದೂ ಅಂತಿಮಗೊಂಡಿಲ್ಲ ಎಂದು ಹೇಳಿದರು.
ಗೌರಿ ಲಂಕೇಶ್ ಹತ್ಯೆಗೆ ಸಂಬಂಧಪಟ್ಟಂತೆ ನಿನ್ನೆ ಕುಖ್ಯಾತ ಶಸ್ತ್ರಾಸ್ತ್ರ ಪೂರೈಕೆದಾರ ತಾಹಿರ್ ಹುಸೇನ್ ಅಲಿಯಾಸ್ ಅನೂಪ್ ಗೌಡ ಎಂಬಾತನನ್ನು ಕೇಂದ್ರ ಅಪರಾಧ ವಿಭಾಗ ಪೊಲೀಸರು ಬಂಧಿಸಿದರು. ನಂತರ ವಿಶೇಷ ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಹುಸೇನ್ ನನ್ನು ಸಂಪೂರ್ಣ ವಿಚಾರಣೆ ನಡೆಸಲಾಗುವುದು. ಮಹಾರಾಷ್ಟ್ರ ಮೂಲದ ಹುಸೇನ್ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಆರೋಪ ಎದುರಿಸುತ್ತಿದ್ದಾನೆ. ಬೇರೆ ಶಸ್ತ್ರಾಸ್ತ್ರ ಪೂರೈಕೆದಾರರ ಜೊತೆ ಕೂಡ ಈತನಿಗೆ ಸಂಬಂಧವಿದೆ ಎನ್ನಲಾಗಿದೆ. 2013ರಲ್ಲಿ ಬಸಪ್ಪ ಹರಿಜನ್ ಕೊಲೆ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದವನ್ನು ಇದೇ ಹುಸೇನ್ ಎಂದು ಪೊಲೀಸರು ಹೇಳುತ್ತಾರೆ.