ಧಾರವಾಡ: ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ. ಅವರು ನಿರಾಪರಾಧಿಯಾಗಿದ್ದು, ಶೀಘ್ರದಲ್ಲೇ ಅವರಿಗೆ ಕ್ಲೀನ್ ಚಿಟ್ ದೊರೆಯುತ್ತದೆ ಎಂದು ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಖ್ಯಾತ ಪತ್ರಕರ್ತ ಹಾಗೂ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರ ಪುತ್ರಿ ಭಾವನಾ ಬೆಳಗೆರೆ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ತಂದೆ ಬಂಧನಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾವನಾ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ದಿಕ್ಕುತಪ್ಪಿಸುವ ಉದ್ದೇಶದಿಂದ ಪ್ರಕರಣದಲ್ಲಿ ನನ್ನ ತಂದೆ ಹೆಸರು ಸಿಕ್ಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹತ್ಯೆಗೆ ಸುಪಾರಿ ನೀಡಿದ್ದಾರೆ ಎನ್ನುವುದು ಕೇವಲ ಆರೋಪವಾಗಿದೆ. ಈ ಸಂಬಂಧ ಯಾರೂ ದೂರು ನೀಡಿಲ್ಲ. ಶಶಿ ನೀಡಿದ ಹೇಳಿಕೆ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನನ್ನ ತಂದೆಯ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಬಲ ಸಾಕ್ಷಾಧಾರಗಳು ಸಿಕ್ಕಿಲ್ಲ. ನಾಲ್ಕು ದಿವಸ ಕಾಯಲೇಬೇಕು ಕಾಯುತ್ತೇವೆ. ನಮ್ಮ ಬಳಿ ಇರುವ ದಾಖಲೆಗಳನ್ನ ಕೋರ್ಟ್ ಗೆ ಪ್ರಸ್ತುತ ಪಡಿಸುತ್ತೇವೆ. ನಮ್ಮ ತಂದೆಗೆ ಕ್ಲೀನ್ ಚಿಟ್ ಸಿಕ್ಕೆಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಷ್ಟು ದೊಡ್ಡ ಕೋಟೆ ಕಟ್ಟಿಕೊಂಡಿರುವ ರವಿ ಬೆಳಗೆರೆ ಎರಡನೇ ಮದುವೆ ಸಲುವಾಗಿ ಕತ್ತು ಕೊಯ್ಯುತ್ತೀನಿ, ಶೂಟ್ ಮಾಡ್ತೀನಿ ಅನ್ನೋ ವ್ಯಕ್ತಿ ಅಲ್ಲ ಎಂದು ಭಾವನಾ ತಮ್ಮ ತಂದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಇನ್ನು ತಮ್ಮ ತಂದೆಯ ಬಳಿ ಇರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡಿದ ಅವರು, ತಂದೆ ಗನ್ ಹೊಂದಿರೋದಕ್ಕೆ ಲೈಸೆನ್ಸ್ ಇದೆ. ಎಲ್ಲ ಆರೋಪಗಳಿಗೂ ಕಾನೂನಿನ ಪ್ರಕಾರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಆರೋಪಿ ಶಶಿ ಜತೆ ಫೋನ್ನಲ್ಲಿ ಹೆಚ್ಚು ಮಾತನಾಡಲು ಕಾರಣವೇನು ಎಂದ ಕೇಳಿದ್ದಕ್ಕೆ ಪ್ರತಿಕ್ರಿಸಿದ ಅವರು, ನನ್ನ ತಂದೆ ಪಾತಕಿಗಳನ್ನ ಮಾತನಾಡಿಸುತ್ತಾರೆ. ಅದೇ ರೀತಿ ಶಶಿ ಜತೆಗೂ ಮಾತನಾಡಿದ್ದಾರೆ. ಅಷ್ಟೇಕೆ ಅವರು ಸುಪಾರಿ ನೀಡಿದ್ದಾರೆ ಎಂದು ಹೇಳುವುದು ತಪ್ಪಾಗುತ್ತದೆ ಎಂದಿದ್ದಾರೆ.