ಬೆಂಗಳೂರು: ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪ ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ 'ಹಾಯ್ ಬೆಂಗಳೂರು' ಪತ್ರಿಕೆಯ ಸಂಪಾದಕ ರವಿಬೆಳಗೆರೆ ಅವರ ವಿಚಾರಣೆ ಮುಂದುವರೆದಿರುವಂತೆಯೇ ಅವರ ಪತ್ನಿ ಯಶೋಮತಿ ಅವರನ್ನು ಕೂಡ ಸಿಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಬೆಂಗಳೂರಿನ ಸಿಸಿಬಿ ಕಚೇರಿಯಿಂದಲೇ ರವಿ ಬೆಳಗೆರೆ ಅವರ 2ನೇ ಪತ್ನಿ ಯಶೋಮತಿ ಅವರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ಪ್ರಕರಣ ಸಂಬಂಧ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಯಶೋಮತಿ ಅವರು ಸುನಿಲ್ ಹೆಗ್ಗರವಳ್ಳಿ ಕುರಿತಂತೆ ಕೆಲ ಹೇಳಿಕೆಗಳನ್ನು ನೀಡಿದ್ದು, ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸುನಿಲ್ ಹಿರಿಯ ಸಂಪಾದಕರಾಗಿದ್ದರು. ನಾನು ಪತ್ರಿಕೆಯ ಎಂಡಿ ಆಗಿದ್ದೆ. ನಮ್ಮ ಕೆಲಸದ ಕುರಿತಾಗಿ ಮಾತ್ರ ನಾವು ಆಗಾಗ ಚರ್ಚೆ ನಡೆಸುತ್ತಿದ್ದೆವು. ಇದನ್ನು ಹೊರತು ಪಡಿಸಿ ವೈಯುಕ್ತಿಕವಾದ ಚರ್ಚೆಗಳನ್ನು ನಾವು ಮಾಡುತ್ತಿರಲಿಲ್ಲ ಎಂದು ಯಶೋಮತಿ ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಹಾಯ್ ಬೆಂಗಳೂರು ಪತ್ರಿಕೆ ಸಹ ಸಂಪಾದಕ ಲೋಕೇಶ್ ಕೊಪ್ಪದ್ ಅವರನ್ನು ಸಿಸಿಬಿ ಕಚೇರಿಗೆ ಕರೆದುಕೊಂಡ ತನಿಖಾಧಿಕಾರಿಗಳು ಸುನೀಲ್ ಹತ್ಯೆಗೆ ಸುಪಾರಿ ಪ್ರಕರಣ ಸಂಬಂಧ ಅವರ ಹೇಳಿಕೆಗಳನ್ನು ಪಡೆದರು. ವಿಚಾರಣೆ ಬಳಿಕ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೇಶ್ ಕೊಪ್ಪದ್, "ನಾನು ಹದಿನಾಲ್ಕು ವರ್ಷದಿಂದ 'ಹಾಯ್‌ಬೆಂಗಳೂರು' ಪತ್ರಿಕೆಯಲ್ಲಿದ್ದೀನಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೊಬೈಲ್‌ನಿಂದ ಸುಪಾರಿ ಹಂತಕರಿಗೆ ಕರೆ ಹೋಗಿದೆ ಎಂಬ ಬಗ್ಗೆ ನನ್ನನ್ನು ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಹೀಗೆ ಆಗಿದ್ದರೆ ನನ್ನನ್ನು ನೇಣಿಗೇರಿಸಿ' ಎಂದು ಅಧಿಕಾರಿಗಳಿಗೆ ಹೇಳಿರುವುದಾಗಿ ತಿಳಿಸಿದರು.
ಅಂತೆಯೇ 'ಸುನೀಲ್ ಹೆಗ್ಗರವಳ್ಳಿ ಮತ್ತು ನಾನು ಒಟ್ಟಿಗೇ ಕೆಲಸ ಮಾಡಿದ್ದೇವೆ. ಕಚೇರಿಯ ಮೇಲೆ ದಾಳಿ ನಡೆಸಿ ರವಿಬೆಳಗೆರೆ ಅವರನ್ನು ಬಂಧಿಸುವ ಕೆಲವೇ ಸಮಯದವರೆಗೂ ಸುನೀಲ್ ಕಚೇರಿಯಲ್ಲಿದ್ದರು.ಅಲ್ಲದೆ, ರವಿ ಬೆಳಗೆರೆ ಯಾರನ್ನು ನಂಬಿಕೊಂಡು 22 ವರ್ಷಗಳಿಂದ ಪತ್ರಿಕೆ ನಡೆಸುತ್ತಿಲ್ಲ. ಪತ್ರಿಕೆ ಈ ವಾರ ಕೂಡ ನಿಲ್ಲುವುದಿಲ್ಲ ಎಂದು ಕೊಪ್ಪದ್ ಹೇಳಿದರು.
ಸುಪಾರಿ ಕೊಲೆ ಪ್ರಕರಣ ಸಂಬಂಧ ಮತ್ತೊಬ್ಬ ಪ್ರಮುಖ ಆರೋಪಿ ಎನ್ನಲಾದ ಭೀಮಾತೀರದ ವಿಜುಬಡಿಗೇರ್ ಪತ್ತೆಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಎನ್ನಲಾದ ಭೀಮಾತೀರದ ಸುಪಾರಿ ಶಶಿಧರ್ ರಾಮಚಂದ್ರ ಮುಂಡೆವಾಡಿ ಸಹಚರನಾಗಿರುವ ವಿಜು, ಈ ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದಾನೆ.