ರವಿ ಬೆಳಗೆರೆ (ಸಂಗ್ರಹ ಚಿತ್ರ)
ಬೆಂಗಳೂರು: ಸಹೋದ್ಯೋಗಿ ಕೊಲೆಗೆ ಸುಪಾರಿ ನೀಡಿದ ಪ್ರಕರಣ ಸಂಬಂಧ 14 ದಿನ ನ್ಯಾಯಾಂಗ ವಶದಲ್ಲಿರುವ ಪತ್ರಕರ್ತ ರವಿಬೆಳಗೆರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿ ಸಂಖ್ಯೆ ನೀಡಲಾಗಿದ್ದು, ರವಿ ಬೆಳಗೆರೆ ಇದೀಗ ವಿಚಾರಣಾಧೀನ ಕೈದಿ ಸಂಖ್ಯೆ 12785..
ಜೈಲಿಗೆ ಹೋದ ಬಳಿಕ ಸಾಕಷ್ಟು ಶಾಂತವಾಗಿದ್ದ ರವಿ ನಿನ್ನೆ ಜೈಲಿನಲ್ಲಿ ಮೊದಲ ರಾತ್ರಿ ಕಳೆದಿದ್ದು, ರಾತ್ರಿ 2 ಗಂಟೆಯವರೆಗೂ ಎಚ್ಚರವಾಗಿಯೇ ಇದ್ದರಂತೆ. ಜೈಲು ಸಿಬ್ಬಂದಿ ರಾತ್ರಿಯಾಯಿತು ಮಲಗಿ ಸರ್ ಎಂದಾಗ.. ನಾವು ರಾತ್ರಿ ಮಲಗುವುದಿಲ್ಲ. ಬೆಳಗಿನ ಜಾವ ಮಲಗುತ್ತೇನೆ ಎಂದು ಉತ್ತರಿಸಿದರಂತೆ. ಅಂತಿಮವಾಗಿ ಸಿಬ್ಬಂದಿ ಬಲವಂತದಿಂದ ರಾತ್ರಿ ಸುಮಾರು 2 ಗಂಟೆ ಹೊತ್ತಿನಲ್ಲಿ ನಿದ್ರಿಸಿದರಂತೆ.
ಇನ್ನು ಬೆಳಗ್ಗೆ 6.30ಕ್ಕೆ ಸಿಬ್ಬಂದಿ ರವಿ ಬೆಳಗೆರೆ ಅವರನ್ನು ಎಬ್ಬಿಸಿದ್ದು, ಬಳಿಕ ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ರವಿ ಬೆಳಗೆರೆ ಅವರಿಗೆ ಬೆಳಗಿನ ತಿಂಡಿಯಾಗಿ ಚಿತ್ರಾನ್ನ ನೀಡಿದರಂತೆ. ಈ ವೇಳೆ ಸಿಬ್ಬಂದಿಯನ್ನು ಕುರಿತು ಮಾಚನಾಡಿದ ರವಿ ಬೆಳಗೆರೆ ನನಗೂ ಚಿತ್ರಾನ್ನವನ್ನೇ ನೀಡಿತ್ತೀರೇನಪ್ಪ ಎಂದು ಕೇಳಿದರಂತೆ. ಕೊನೆಗೆ ಅದನ್ನೇ ತಿಂದು ಬೆಳಗಿನ ತಿಂಡಿ ಮುಗಿಸಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನಲ್ಲೂ ಸಿಗರೇಟ್ ಗಾಗಿ ಪಟ್ಟು, ಸಿಬ್ಬಂದಿಯೊಂದಿಗೆ ವಾಗ್ವಾದ
ಇನ್ನು ಜೈಲುಪಾಲಾಗಿರುವ ರವಿ ಬೆಳಗೆರೆ ಜೈಲಿನಲ್ಲೂ ಸಿಗರೇಟ್ ಗಾಗಿ ಪಟ್ಟು ಮುಂದುವರೆಸಿದ್ದು, ಜೈಲಿನಲ್ಲಿ ಸಿಗರೇಟ್ ಸೇದಬಾರದು ಎಂಬ ನಿಯಮವಿದ್ದರೂ, ಸಿಗರೇಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರಂತೆ. ಜೈಲು ಅಧಿಕಾರಿಗಳು ಎಷ್ಟೇ ಮನವೊಲಿಕೆ ಮಾಡಿದರೂ ರವಿ ಬೆಳಗೆರೆ ಬಗ್ಗಲಿಲ್ಲ. ಅಂತಿಮವಾಗಿ ಜೈಲು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ರವಿ ಬೆಳಗೆರೆ ಅವರಿಗೆ ಒಂದು ಸಿಗರೇಟ್ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.