ಬೆಂಗಳೂರು: ಬಳಸದೆ ಇರುವ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಹಣವನ್ನು ಶಾಲೆ, ಅಂಗನವಾಡಿಗಳ ನಿರ್ಮಾಣ ಮತ್ತು ದುರಸ್ತಿಗೆ ಬಳಸಿಕೊಳ್ಳಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಸಿದ್ದು ಸರ್ಕಾರದ ನಡೆ ಸೇವೆಗಳ ಕಡೆ ಎಂಬ ಸರ್ಕಾರದ ಕಾರ್ಯಕ್ರಮವನ್ನು ಆರಂಭಿಸಿರುವ ರಾಜ್ಯ ಸರ್ಕಾರ ಶಾಸಕರ ನಿಧಿಯನ್ನು ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಆರೋಗ್ಯ ಸೇವೆಗಳ ಸುಧಾರಣೆಗಳಿಗಾಗಿ ಬಳಸಿಕೊಳ್ಳಲಿದೆ.
ಜಿಲ್ಲಾಧಿಕಾರಿಗಳ ಖಾತೆಗಳಲ್ಲಿರುವ 406 ಕೋಟಿ ರೂಪಾಯಿ ಕಳೆದೊಂದು ದಶಕದಿಂದ ಖರ್ಚು ಮಾಡದೆ ಉಳಿದುಕೊಂಡಿದ್ದು ವಿಧಾನಸಭೆ ಚುನಾವಣೆ ಹತ್ತಿರ ಬರುವ ಹೊತ್ತಿಗೆ ಅಂದರೆ ಮಾರ್ಚ್ ಒಳಗೆ ಆ ಹಣವನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ನಿನ್ನೆ ಈ ವಿಷಯವನ್ನು ತಿಳಿಸಿದ ಸಾಂಖ್ಯಿಕ ಮತ್ತು ಯೋಜನೆ ಖಾತೆ ಸಚಿವ ಎಂ.ಆರ್.ಸೀತಾರಾಮ್, 2002ರಿಂದ 2013ರವರೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಇರುವ ಹಣವನ್ನು ಇದುವರೆಗೆ ಬಳಸಿರಲಿಲ್ಲ. ಇದೀಗ ಆ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಮಧ್ಯೆ ನಿರ್ದಿಷ್ಟ ಯೋಜನೆಗಳಿಗೆ ಹಂಚಲಾಗುತ್ತದೆ. ಇದೇ ಮೊದಲ ಬಾರಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಹಣವನ್ನು ಪತ್ತೆಹಚ್ಚಲಾಗಿದೆ. ಮಾಜಿ ಶಾಸಕರುಗಳಿಗೆ ಈ ಹಣದ ಮೇಲೆ ಹಿಡಿತವಿರುವುದಿಲ್ಲ ಎಂದು ಹೇಳಿದರು.
ಸರ್ಕಾರಿ ಶಾಲೆಗಳ 2719 ತರಗತಿಗಳ ನಿರ್ಮಾಣ ಮತ್ತು ದುರಸ್ತಿಗೆ ಶಿಕ್ಷಣ ಇಲಾಖೆಗೆ ಸಿಂಹಪಾಲು 243 ಕೋಟಿ ರೂಪಾಯಿ ಸಿಕ್ಕಿದೆ. ಆರೋಗ್ಯ ಇಲಾಖೆಗೆ 309 ಸರ್ಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 122 ಕೋಟಿ ರೂಪಾಯಿ ನೀಡಲಾಗಿದೆ. ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 346 ಅಂಗನವಾಡಿಗಳ ನಿರ್ಮಾಣಕ್ಕೆ 40 ಕೋಟಿ ರೂಪಾಯಿ ನೀಡಲಾಗುತ್ತದೆ.