ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿರ್ವಹಿಸುತ್ತಿರುವ ಹಲವಾರು ವಿದ್ಯುತ್ ಸಬ್ ಸ್ಟೇಷನ್ ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಶುಕ್ರವಾರ ಸಂಜೆ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿತ್ತು. ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಮ್) ಪ್ರಕಾರ, ಇಪಿಐಪಿ, ಹೂಡಿ, ಹೆಬ್ಬಾಳ ಮತ್ತು ಈಸ್ಟ್ ಕಂಪೌಂಡ್ ಗಳಲ್ಲಿ 220 ಕೆ.ವಿ. ಸ್ಟೇಷನ್ ಗಳಲ್ಲಿ ವಿದ್ಯುತ್ ಪೂರೈಕೆಗಳಲ್ಲಿ ಲೋಪ ಕಂಡುಬಂದಿದೆ.
ರಾತ್ರಿ 7 ಗಂಟೆಗೆ ವಿದ್ಯುತ್ ಕಡಿತವಾಗಿದ್ದು ತಡರಾತ್ರಿಯವರೆಗೂ ಸಮಸ್ಯೆ ಮುಂದುವರಿದಿತ್ತು. ಮಲ್ಲೇಶ್ವರಂ, ಕೋರಮಂಗಲ, ಓಲ್ಡ್ ಏರ್ಪೋರ್ಟ್ ರಸ್ತೆ, ಇನ್ ಫ್ಯಾಂಟ್ರಿ ರಸ್ತೆ, ವಿಕ್ಟೋರಿಯಾ ರಸ್ತೆ, ಫ್ರೇಜರ್ ಟೌನ್, ಮಾರತ್ ಹಳ್ಳಿ, ಎಚ್.ಆರ್.ಬಿ.ಆರ್ ಲೇಔಟ್, ಉದಯನಗರ, ಬಿ.ನಾರಾಯಣಪುರ ಮತ್ತಿತರೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಿತ್ತು. "ಸರ್ಕಾರವು ವಿದ್ಯುತ್ ದರವನ್ನು ಮಾತ್ರ ಏರಿಸುತ್ತದೆ, ಅದೇ ಸಮಯ ಸೂಕ್ತ ವಿದ್ಯುತ್ ಸರಬರಾಜು ನಡೆಸುತ್ತಿಲ್ಲ. ಇಂದು ಸಂಜೆಯಿಂದ ರಾತ್ರಿಯವರೆಗೂ ನಮಗೆ ವಿದ್ಯುತ್ ಸರಬರಾಜು ಇರಲಿಲ್ಲ. ಇದಲ್ಲದೆ ಆಗಾಗ ವಿದ್ಯುತ್ ಕಡಿತವಾಗುವುದು ಮಾಮೂಲಿ ಎನ್ನುವಂತಾಗಿದೆ." ಕೋರಮಂಗಲ ನಿವಾಸಿ ಸುಜಿತ್ ಜಾನ್ ಹೇಳಿದ್ದಾರೆ.