ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದ್ಯಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ ಶನಿವಾರ ಹೊಸ ತಿರುವು ಪಡೆದುಕೊಂಡಿದ್ದು, ಯೋಗೀಶ್ ಗೌಡ ಅವರ ಪತ್ನಿ ಮಲ್ಲಮ್ಮ ಅವರು ತಮ್ಮ ತನ್ನನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿದ್ದ ಭಾವನ ವಿರುದ್ಧವೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಯೋಗೀಶ್ ಗೌಡ ಅವರ ಪತ್ನಿ ಮಲ್ಲಮನನ್ನು ಕಿಡ್ನಾಪ್ ಮಾಡಲಾಗಿದ್ದು, ಕಾಂಗ್ರೆಸ್ ಸೇರುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಯೋಗೀಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಅವರು ನಿನ್ನೇ ಆರೋಪಿಸಿದ್ದರು. ಆದರೆ ಇಂದು ದಿಢೀರ್ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿರುವ ಮಲ್ಲಮ್ಮ, ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ. ನನ್ನ ಬಗ್ಗೆ ಕೇಳಿ ಬರುತ್ತಿರುವ ಎಲ್ಲಾ ಮಾಹಿತಿಗಳು ಸುಳ್ಳು. ನನ್ನನ್ನು ಕಾಂಗ್ರೆಸ್ ಪಕ್ಷದ ಯಾರು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಮಲ್ಲಮ್ಮ, ನನ್ನ ಗಂಡನ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಪಾತ್ರ ಇದೆ ಅಂತ ನಾನು ಸುಮ್ಮನೆ ಆರೋಪ ಮಾಡಲ್ಲ. ಗಂಡನನ್ನು ಕೊಂದವರಿಗೆ ಶಿಕ್ಷೆ ಆಗಬೇಕು. ನನಗೂ, ನನ್ನ ನಾಲ್ಕು ಮಕ್ಕಳಿಗೂ ನ್ಯಾಯ ಸಿಗಬೇಕು ಅಷ್ಟೆ ಎಂದಿದ್ದಾರೆ.
ಇನ್ನು ತಮ್ಮ ಭಾವ ಮತ್ತು ಅವರ ಕುಟುಂಬ, ಹಾಗೂ ಕೆಲ ಬಿಜೆಪಿ ಸದಸ್ಯರು ತನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಅವರಿಂದ ಜೀವಭವಿದೆ ಎಂದು ಆರೋಪಿಸಿ ರಾಜ್ಯ ಮಹಿಳಾ ಆಯೋಗಕ್ಕೆ ಮಲ್ಲಮ್ಮ ದೂರು ಸಹ ನೀಡಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಜಾತಿಯವರಾಗಿದ್ದು, ನನ್ನ ತಂದೆಯ ಸಮಾನ. ಅವರ ಬಳಿ ಹೋದರೆ ನನಗೆ ನ್ಯಾಯ ಸಿಗುತ್ತೆ. ಅವರು ಸೇರಿಸಿಕೊಂಡ್ರೆ ನಾನು ಕಾಂಗ್ರೆಸ್ ಸೇರುತ್ತೇನೆ. ಸಚಿವ ವಿನಯ್ ಕುಲಕರ್ಣಿ ಇದುವರೆಗೆ ನನ್ನೊಂದಿಗೆ ಯಾವತ್ತೂ ಮಾತಾಡಿಲ್ಲ. ನನ್ನ ಭಾವ ಗುರುನಾಥ್ ಗೌಡ ಪ್ರತಿಯೊಂದಕ್ಕೂ ನನಗೆ ಅಡ್ಡಿಪಡಿಸುತ್ತಿದ್ದಾರೆ. ನಾನು ಯಾರನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಗಂಡನ ಸಾವನ್ನು ನನ್ನ ಭಾವ ಹಾಗೂ ಸ್ಥಳೀಯ ನಾಯಕರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಲ್ಲಮ್ಮ ಆರೋಪಿಸಿದ್ದಾರೆ.
ರಾತ್ರೋ ರಾತ್ರಿ ಯೋಗೇಶ್ ಗೌಡ ಪತ್ನಿ ಮಲ್ಲಮ್ಮರನ್ನು ಕಾಂಗ್ರೆಸ್ ನಾಯಕರು ಕರೆದೊಯ್ದಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶಗೌಡ ಹಾಗೂ ನಾಗರಾಜ ಗೌರಿಯ ಮೂಲಕ ಕಾಂಗ್ರೆಸ್ ಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದ್ದು, ಜೀವ ಬೆದರಿಕೆ ಒಡ್ಡಿ ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳುವ ಯತ್ನ ನಡೆದಿದೆ ಎಂದು ಯೋಗೇಶ್‍ಗೌಡ ಸಹೋದರ ಗುರುನಾಥ ಗೌಡ ಆರೋಪಿಸಿದ್ದರು.