ರಾಜ್ಯ

ಐಎಎಫ್'ನಲ್ಲಿ 45 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದ ಎಂಐ-8 ಪ್ರತಾಪ್ ಹೆಲಿಕಾಪ್ಟರ್'ಗೆ ವಿದಾಯ

Manjula VN
ಬೆಂಗಳೂರು: ಭಾರತೀಯ ವಾಯುಪಡೆಯಲ್ಲಿ (ಐಎಎಫ್) 45 ವರ್ಷಗಳ ಕಾಲ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಎಂಐ-8 ಹೆಲಿಕಾಪ್ಟರ್ ಪ್ರತಾಪ್ ಭಾನುವಾರ ನಗರದ ಯಲಹಂಕ ವಾಯುನೆಲೆಯಲ್ಲಿ ತನ್ನ ಕೊನೆಯ ಹಾರಾಟ ನಡೆಸಿದವು. 
ಯಲಹಂಕ ವಾಯುನೆಲೆಯಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ಎಸ್ಆರ್'ಕೆ ನಾಯರ್ ಹಾಗೂ ನಿವೃತ್ತ ಏರ್ ಚೀಫ್ ಮಾರ್ಷನ್ ಎಫ್ಎಚ್ ಮೇಜರ್ ಸಮಕ್ಷಮದಲ್ಲಿ ವಾಯುಸೇನೆಯಿಂದ ಎಂಐ-8 ಹೆಲಿಕಾಪ್ಟರ್'ಗೆ ಗೌರವ ವಿದಾಯ ಹೇಳಲಾಯಿತು. 
ಸುಮಾರು 50 ರಾಷ್ಟ್ರಗಳ ಸೇನೆಯಲ್ಲಿ ಬಳಕೆಯಿದ್ದ ಎಂಐ-8 ಹೆಲಿಕಾಪ್ಟರ್, 2015ರವರೆಗೆ ಮೂರನೇ ಅತೀ ಹೆಚ್ಚು ಬಳಕೆಯ ಹೆಲಿಕಾಪ್ಟರ್ ಆಗಿ ಗುರುತಿಸಿಕೊಂಡಿತ್ತು. 1971ರಲ್ಲಿ ರಷ್ಯಾದಿಂದ ದೇಶಕ್ಕೆ ಆಮದಾದ ಎಂಐ-8 ಹೆಲಿಕಾಪ್ಟರ್ ಭಾರತೀಯ ವಾಯುಪಡೆಗೆ 1972ರಲ್ಲಿ ಸೇರ್ಪಡೆಯಾಗಿತ್ತು. 
1971ರಿಂದ 1988ರವರೆಗೆ ಒಟ್ಟು 107 ಎಂಐ-8 ಹೆಲಿಕಾಪ್ಟರ್ ಗಳನ್ನು ಪ್ರತಾಪ್ ಹೆಸರಿನಲ್ಲಿ ಸೇರ್ಪಡೆಗೊಳಿಸಿದ್ದು, ದೇಶದ ಆಂತರಿಕ ಭದ್ರತೆ, ಯುದ್ಧ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿವೆ. ದೇಶದ 10 ಹೆಲಿಕಾರ್ಟರ್ ಯೂನಿಟ್ ಗಳಲ್ಲಿ ಐಎಎಫ್'ನ ಆಪರೇಷನ್ ಗಳಲ್ಲಿ ಹೆಲಿಕಾಪ್ಟರ್ ಬಳಕೆಯಾಗಿತ್ತು. ವಿಐಪಿ, ವಿವಿಐಪಿಗಳ ಪ್ರಯಾಣಕ್ಕಾಗಿ ಹಲವು ದಶಕಗಳ ಕಾಲ ಬಳಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 
ಇಂತಹ ಹೆಲಿಕಾಪ್ಟರ್ ನ್ನು ಕೊನೆಯದಾಗಿ ಬಳಸುತ್ತಿದ್ದ ಯಲಹಂಕ ವಾಯುನೆಲೆಯಲ್ಲಿರುವ 112-ಹೆಲಿಕಾಪ್ಟರ್ ಯೂನಿಟ್ ಕೂಡ ಭಾನುವಾರ ಕೊನೆಯ ವಿದಾಯ ಹೇಳಿದೆ. 
ಪ್ರತಾಪ್ 4 ಸಾವಿರ ಕೆಜಿ ಭಾರ ಹೊತ್ತು ಹಾರಬಲ್ಲ ಸಾಮರ್ಥ್ಯವುಳ್ಳದಾಗಿತ್ತು. ಜತೆಗೆ ಸಮರಕ್ಕೂ ಸಿದ್ಧವಿದ್ದ ಎಂಐ-8 ಹೆಲಿಕಾಪ್ಟರ್ ಒಟ್ಟು ಒಂದು ಸಾವಿರ ಕೆಜಿ ತೂಕವುಳ್ಳ 40 ಬಾಂಬ್ ಗಳನ್ನು ಹೊತ್ತು ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿತ್ತು. ಇಂತಹ ಹೆಲಿಕಾಪ್ಟರ್'ನ ಅಂತಿಮ ಹಾರಾಟಕ್ಕೆ ಭಾನುವಾರ ಯಲಹಂಕ ವಾಯುನೆಲೆ ಸಾಕ್ಷಿಯಾಯಿತು. 
SCROLL FOR NEXT