ರಾಜ್ಯ

ಹೊಸ ವರ್ಷಕ್ಕೆ ಸನ್ನಿ ಲಿಯೋನ್ ಕಾರ್ಯಕ್ರಮ: ಗೃಹ ಸಚಿವರನ್ನು ಭೇಟಿ ಮಾಡಲಿರುವ ಆಯೋಜಕರು

Sumana Upadhyaya
ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಗೆ ನಟಿ ಸನ್ನಿ ಲಿಯೋನ್ ಕಾರ್ಯಕ್ರಮ ಏರ್ಪಡಿಸಲು ಅನುಮತಿ ನೀಡಲು ನಗರ ಪೊಲೀಸ್ ಇಲಾಖೆ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ಇಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಲಿದ್ದಾರೆ.
ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸುತ್ತಿರುವ ದ ಟೈಮ್ ಕ್ರಿಯೇಷನ್ ಜಾಹಿರಾತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಎಂ.ಎಸ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ತಾವು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಇಂದು ಭೇಟಿ ಮಾಡಲಿದ್ದು ಈ ಸಂದರ್ಭದಲ್ಲಿ ವಿಷಯದ ಬಗ್ಗೆ ಹೆಚ್ಚು ಸ್ಪಷ್ಟತೆ ಸಿಗಬಹುದು ಎಂದು ಭಾವಿಸುತ್ತೇನೆ ಎಂದಿದ್ದಾರೆ. 
ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿ, ಹೊಸ ವರ್ಷದ ಮುನ್ನಾದಿನ ನಗರದ ಬಹುತೇಕ ಕಡೆ ಪೊಲೀಸರು ಶಾಂತಿ, ಭದ್ರತೆಗೆ ನಿಯೋಜಿತವಾಗುವುದರಿಂದ ಪೊಲೀಸರು ಕಾರ್ಯಕ್ರಮಕ್ಕೆ ಹೆಚ್ಚು ಭದ್ರತೆ ನೀಡಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಭಾಗವಹಿಸುವಿಕೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಸನ್ನಿ ಲಿಯೋನ್ ಭಾಗವಹಿಸುವಿಕೆ ಕನ್ನಡ ಸಂಸ್ಕೃತಿಗೆ ವಿರುದ್ಧವಾಗಿದ್ದು ಆಕೆ ಭಾಗವಹಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕನ್ನಡಪರ ಸಂಘಟನೆಗಳು ಬೆದರಿಕೆ ಹಾಕಿವೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಟಿಕೆಟ್ ಗಳು ವೆಬ್ ಸೈಟ್ ನಲ್ಲಿ ಇನ್ನೂ ಲಭ್ಯವಿದೆ.
SCROLL FOR NEXT