ರಾಜ್ಯ

ಮಕ್ಕಳಿಗೆ ಬೇಕಾಗಿಯಾದರೂ ಅಹಂ ಭಾವವನ್ನು ತೊರೆಯಿರಿ: ಪೋಷಕರಿಗೆ ಹೈಕೋರ್ಟ್ ಛೀಮಾರಿ

Sumana Upadhyaya
ಬೆಂಗಳೂರು: ಪೋಷಕರ ನಡುವಿನ ಅಹಂಭಾವದಿಂದಾಗಿ ವೈವಾಹಿಕ ವಿವಾದಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ಪೋಷಕರು ತಮ್ಮ ಅಹಂಭಾವವನ್ನು ತೊರೆದು ಮನೋಧರ್ಮವನ್ನು ಬದಲಾಯಿಸಿಕೊಳ್ಳದಿದ್ದರೆ ಅವರ ಮಕ್ಕಳು ಬಲಿಪಶುವಾಗುತ್ತಾರೆ ಎಂದು ಹೇಳಿದೆ.
ದಂಪತಿಯ ನಡುವಿನ ಕಲಹದಿಂದಾಗಿ 6 ವರ್ಷದ ಮಗ ಚಿಕ್ಕಮಗಳೂರಿನಲ್ಲಿ ವಸತಿ ಶಾಲೆಯಲ್ಲಿ ಓದುವ ಪರಿಸ್ಥಿತಿ ಬಂದಿದ್ದು, ಈ ಕೇಸಿನ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದ್ದಾರೆ. ಕ್ರಿಸ್ ಮಸ್ ಮತ್ತು ಚಳಿಗಾಲದ ರಜೆಯಲ್ಲಿ ತಮ್ಮ ಬಳಿ ಮಗ ಇರಬೇಕೆಂದು ಪೋಷಕರಿಬ್ಬರೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಬಾಲಕನ ತಂದೆ ಮತ್ತು ತಾಯಿಯ ಪರ ಕೋರ್ಟ್ ನಲ್ಲಿ ವಕಾಲತ್ತು ವಹಿಸುವ ವಕೀಲರು ವೃತ್ತಿಪರರಾಗಿ ವರ್ತಿಸುವುದಕ್ಕೆ ಬದಲು ಪೋಷಕರಾಗಿ ಮಾನವೀಯತೆ ತೋರುವಂತೆ ಹೇಳಿದರು.
ನ್ಯಾಯಾಲಯ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಕೂಡ ಮಗುವಿಗಾಗಿ ತಂದೆ ತಾಯಿ ಒಟ್ಟಾಗಲು ನಿರಾಕರಿಸುತ್ತಿದ್ದಾರೆ. ಮಗುವಿಗೆ ತಂದೆ-ತಾಯಿಯ ಪ್ರೀತಿ ಬೇಕಾಗಿದೆ. ಇದೊಂದು ದುರದೃಷ್ಟಕರ ಸಂಗತಿ. ಮಗುವಿಗಾಗಿ ಪೋಷಕರು ತಮ್ಮ ಮನೋಧರ್ಮವನ್ನು ಬದಲಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು.
ನಂತರ, ಮಗುವನ್ನು ತಾಯಿಗೆ ಮೂರು ದಿನ ಮತ್ತು ತಂದೆಗೆ ಮೂರು ದಿನ ನೋಡಿಕೊಳ್ಳಲು ಅನುಮತಿ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.
SCROLL FOR NEXT