ಮೆಹಂದಿ ದಿನ ಪ್ರಿಯಕರನೊಡನೆ ನಾಪತ್ತೆಯಾಗಿದ್ದ ಯುವತಿ ಪೋಲೀಸರ ವಶಕ್ಕೆ
ಮೂಡಬಿದಿರೆ: ಮದುವೆಗೆ ಎರಡು ದಿನ ಮೊದಲು ತಾನು ಪ್ರೀತಿಸುತ್ತಿದ್ದ ಯುವಕನೊಡನೆ ಪರಾರಿಯಾಗಿದ್ದ ಮೂಡಬಿದಿರೆಯ ಯುವತಿಯನ್ನು ಪೋಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಪಣಂಬೂರು ಹಾಗೂ ಮೂಡಬಿದಿರೆ ಪೋಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಯುವಜೋಡಿಯನ್ನು ಮುಂಬೈನಲ್ಲಿ ಪತ್ತೆಹಚ್ಚಿದ್ದಾರೆ.
ಪ್ರೇಮಿಗಳನ್ನು ವಶಕ್ಕೆ ಪಡೆದ ಪೋಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ಯುವತಿಗೆ ಡಿ.26 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ವೇಳೆ ಆಕೆಯ ಪ್ರಿಯಕರನ ವಿರುದ್ಧ ಯಾವ ಪ್ರಕರಣವೂ ದಾಖಲಾಗಿಲ್ಲದ ಕಾರಣ ಅವನನ್ನು ವಶಕ್ಕೆ ಪಡೆದಿರುವ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಮೂಡಬಿದಿರೆ ಪ್ರಿಯಾಂಕಾ ಎನ್ನುವ ಯುವತಿಗೆ ಕುಂದಾಪುರ ಮೂಲದ ಯುವಕನೊಡನೆ ಮದುವೆ ನಿಶ್ಚಯವಾಗಿದ್ದು ಡಿ.11ಕ್ಕೆ ಮದುವೆ ಏರ್ಪಾಟಾಗಿತ್ತು. ಆದರೆ ಮದುವೆಗೆ ಎರಡು ದಿನಗಳಿರುವಾಗ ನಡೆದಿದ್ದ ಮೆಹದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಧು ಡಿ.9ರ ರಾತ್ರಿ ನಾಪತ್ತೆಯಾಗಿದ್ದಳು. ಪ್ರಿಯಾಂಕಾಗೆ ಪಣಂಬೂರಿನ ಹೈದರ್ ಎನ್ನುವ ಯುವಕನೊಡನೆ ಸಂಬಂಧವಿತ್ತು. ಆತನ ಪ್ರೇಮಪಾಶಕ್ಕೆ ಸಿಲುಕಿದ ಯುವತಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಲ್ಲದೆ ಪ್ರತಿಭಟನೆ ನಡೆಸಿದ್ದವು
ಪ್ರಿಯಾಂಕ ಮನೆಯವರಿಗೆ ಅಮಲು ಪದಾರ್ಥ ನೀಡಿ ಚಿನ್ನಾಭರಣ ಹಾಗೂ ಆಧಾರ್ ಕಾರ್ಡ್ ನಂತಹಾ ದಾಖಲೆಗಳೊಡನೆ ಪರಾರಿಯಾಗಿದ್ದಾಳೆ ಎಂದು ಆಕೆಯ ತಾಯಿ ಮೂಡುಬಿದಿರೆ ಪೋಲೀಸರಿಗೆ ದೂರು ಸಲ್ಲಿಸಿದ್ದರು. ಕರಾವಳಿ ಭಾಗ ಸೇರಿ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣವನ್ನು ಪೋಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಇದೀಗ ಯುವತಿ ಜೈಲು ಸೇರಿದ್ದು ಹಸೆಮಣೆ ಏರಬೇಕಾದವಳು ಜೈಲು ಪಾಲಾಗಿರುವುದು ಮಾತ್ರ ವಿಪರ್ಯಾಸ.