ಕಾರ್ಯಕ್ರಮಕ್ಕೆ ಆಗಮಿಸಿದ್ದ 14ನೇ ದಲೈ ಲಾಮಾ
ಬೆಂಗಳೂರು: ಭಾರತದ ಪುರಾತನ ಜ್ಞಾನವನ್ನು ಪುನರುಜ್ಜೀವನಗೊಳಿಸುವುದು ಅತ್ಯಗತ್ಯ ಎಂದು 14ನೇ ದಲೈ ಲಾಮಾ ಹೇಳಿದ್ದಾರೆ. ಧಾರ್ಮಿಕ ಸಾಮರಸ್ಯ ಕಾಪಾಡುವುದು ಕೂಡ ಮುಖ್ಯ ಎಂದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ನಿನ್ನೆ ನಗರದ ಅರಮನೆ ಮೈದಾನದಲ್ಲಿ ದೇಶದ ಮರು ನಿರ್ಮಾಣದಲ್ಲಿ ಬುದ್ಧಿವಂತಿಕೆಗೆ ಮತ್ತು ಸಹಾನುಭೂತಿಗೆ ಶಿಕ್ಷಣ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಭಾರತದಲ್ಲಿ ವಿವಿಧ ಧರ್ಮ ಮತ್ತು ಸಂಪ್ರದಾಯಗಳನ್ನು 3 ಸಾವಿರ ವರ್ಷಗಳಿಂದ ಅನುಸರಿಸಿಕೊಂಡು ಬರಲಾಗುತ್ತಿದೆ. ಅಷ್ಟು ದೀರ್ಘ ಇತಿಹಾಸ ಭಾರತದ ಧರ್ಮಕ್ಕಿದೆ ಎಂದರು.
ಧರ್ಮದ ಹೆಸರಿನಲ್ಲಿ ಬೇರೆ ದೇಶಗಳಲ್ಲಿ ಸಂಘರ್ಷಗಳು ನಡೆಯುತ್ತವೆ. ಇದಕ್ಕೆಲ್ಲಾ ಭಾರತ ಮಾದರಿಯಾಗಿ ಉದಾಹರಣೆಯಾಗಿ ನಿಂತು ಧಾರ್ಮಿಕ ವಿವಾದಗಳನ್ನು ಬಗೆಹರಿಸಬಹುದು. ಧಾರ್ಮಿಕ ಸಹಿಷ್ಣುತೆ ಅಭಿವೃದ್ಧಿಪಡಿಸಲು ನಾನು ಬದ್ಧನಾಗಿದ್ದೇನೆ ಎಂದರು.
ಭಾರತದ ಪುರಾತನ ಜ್ಞಾನವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ಹೇಳಿದ ದಲೈಲಾಮ ಅದು ಇಂದಿನ ಜಗತ್ತಿಗೆ ಅಗತ್ಯ ಕೂಡ ಆಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಹಲವು ಅಭಿವೃದ್ಧಿಗಳಾಗಿವೆ. ಸಾವಿರ ವರ್ಷಗಳ ಇತಿಹಾಸ, ಸಂಪ್ರದಾಯಗಳಿರುವ ಭಾರತ ದೇಶ, ಭಾವನೆಗಳ ಜೊತೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಕಲಿಸುತ್ತದೆ ಎಂದರು.
ಭೌತಿಕ ಮತ್ತು ಆಂತರಿಕ ಬೆಳವಣಿಗೆಗೆ ಶಿಕ್ಷಣ ವ್ಯವಸ್ಥೆ ಒತ್ತು ನೀಡಬೇಕು. ನರೇಂದ್ರ ಮೋದಿ ಸರ್ಕಾರದ ಬಗ್ಗೆ ಸಭಿಕರು ಪ್ರಶ್ನೆ ಕೇಳಿದಾಗ ನನಗೆ ಇದರಲ್ಲಿ ಯಾವುದೇ ನೇರ ವ್ಯವಹಾರಗಳಿಲ್ಲ. ಅದು ನಿಮಗೆ ಬಿಟ್ಟಿದ್ದು ಎಂದು ಹೇಳಿದರು.