ಮಡಿಕೇರಿ ರಾಜಾಸೀಟ್ ನಲ್ಲಿ ಬೆಂಕಿ ಆಕಸ್ಮಿಕ
ಮಡಿಕೇರಿ: ಮಡಿಕೇರಿಯ ಪ್ರಸಿದ್ದ ಪ್ರವಾಸಿ ತಾಣ ರಾಜಾಸೀಟ್‌ನಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ.
ರಾಜಾಸೀಟ್ ವ್ಯೂ ಪಾಯಿಂಟ್ ಹಿಂಬದಿಯಲ್ಲಿನ ಗುಡ್ಡ ಪ್ರದೇಶದಲ್ಲಿ ಇಂದು ಅಪರಾಹ್ನ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮವಾಗಿ 15 ಎಕರೆ ಅರಣ್ಯ ಭಸ್ಮವಾಗಿದೆ. ಲಕ್ಷದೋಪಾದಿಯ ಪಕ್ಷಿಗಳು ಹಾಗೂ ಮರಗಳು ಬೆಂಕಿಗೆ ಆಹುತಿಯಾಗಿವೆ.
ದುಷ್ಕರ್ಮಿಗಳು ಉದ್ದೇಶಪೂರ್ವಕ ಬೆಂಕಿ ಹಚ್ಚಿದ್ದಾರೆಯೆ ಅಥವಾ ಯಾರಾದರೂ ಸಿಗರೇಟು ಸೇದಿಉ ಎಸೆದಿದ್ದೇ ಅವಘಡಕ್ಕೆ ಕಾರಣವೇ ಎಂದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳಿಗೆ ಕಾಡಿನಲ್ಲಿ ಹೊತ್ತಿದ್ದ ಬೆಂಕಿಯ ಸಮೀಪಕ್ಕೂ ಹೋಗಲು ಸಾದ್ಯವಾಗಲಿಲ್ಲ. ಸ್ಥಳೀಯ ಪೋಲೀಸರ ಸಹಕಾರದೊಡನೆ ಸೊಪ್ಪು ಹಿಡಿದು ಬೆಂಕಿ ನಿಯಂತ್ರಿಸಲು ಪ್ರಯತ್ನಿಸಿದರಾದರೂ ಅದು ವಿಫಲವಾಗಿತ್ತು. ಹೀಗಾಗಿ ಕಾಳ್ಗಿಚ್ಚು ತನ್ನ ಕೆನ್ನಾಲಿಗೆಯನ್ನು ಚಾಚುತ್ತಾ ಮುಂದುವರಿದಿತ್ತು.