ರಾಜ್ಯ

ಸರ್ಕಾರಿ ಶಾಲೆಗಳ ನವೀಕರಣ, ದುರಸ್ತಿಗೆ ಹಳೆಯ ವಿದ್ಯಾರ್ಥಿಗಳ ನೆರವು ಕೇಳಲು ಶಾಲೆಗಳು ಮುಂದು!

Srinivas Rao BV
ಬೆಂಗಳೂರು: ರಾಜ್ಯಾದ್ಯಂತ ಇರುವ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ನವೀಕರಣ, ದುರಸ್ತಿ ಮಾಡಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.100 ರಷ್ಟು ವಿದ್ಯಾರ್ಥಿಗಳ ದಾಖಲಾತಿ ಹಾಗೂ ಉತ್ತಮ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಇಲಾಖೆ ನಿರ್ಧರಿಸಿದೆ. 
ಸರ್ಕಾರಿ ಶಾಲೆಗಳನ್ನು ನವೀಕರಣಗೊಳಿಸುವುದಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಕಾಮಗಾರಿಗೆ ಅಗತ್ಯವಿರುವ ಶೇ.40 ರಷ್ಟು ಹಣವನ್ನು ಇಲಾಖೆಯೇ ನೀಡುತ್ತದೆ ಹಾಗೂ ಉಳಿದ ಹಣವನ್ನು ಬೇರೆ ಇಲಾಖೆಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸಂಗ್ರಹಿಸಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ನವೀಕರಣ ಕಾಮಗಾರಿಗೆ ಹಳೆಯ ವಿದ್ಯಾರ್ಥಿಗಳಾ ನೆರವನ್ನೂ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ. 
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ (ಆರ್ ಡಿಪಿಆರ್) ಹಾಗೂ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನವನ್ನು ಕೇಳುತ್ತೇವೆ ಎಂದು ತನ್ವೀರ್ ಸೇಠ್ ಹೇಳಿದ್ದಾರೆ. ಅಂದಾಜಿನ ಪ್ರಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿ, ದುರಸ್ತಿಗೆ 1,600 ಕೋಟಿ ರೂಪಾಯಿ ಅಗತ್ಯವಿದ್ದು, 48.909 ಸರ್ಕಾರಿ ಶಾಲೆಗಳಿದ್ದು, ಈ ಪೈಕಿ 37,171 ಕೋಠಡಿಗಳು ಹೆಚ್ಚಿನ ಪ್ರಮಾಣದಲ್ಲಿ ದುರಸ್ತಿಯಾಗಬೇಕಿದೆ, 34,891 ಕೋಠಡಿಗಳು ಸಣ್ಣ ಪ್ರಮಾಣದಲ್ಲಿ ದುರಸ್ತಿಯಾಗಬೇಕಿದೆ.
SCROLL FOR NEXT