ಬೆಂಗಳೂರು: ಈ ಹೊಸ ವರ್ಷ ನೀವು ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಕಳೆಯಬೇಕೆಂದು ಯೋಚಿಸಿದರೆ ಅಥವಾ ನಗರದ ಯಾವುದೇ ಪ್ರಮುಖ ಸ್ಥಳಗಳಲ್ಲಿ ಸುತ್ತಾಡಬೇಕೆಂದು ಬಯಸಿದರೆ ಮದ್ಯಪಾನ ಸೇವನೆಯಿಂದ ಆದಷ್ಟು ದೂರವಿರಲು ಪ್ರಯತ್ನಿಸಿ.
ಯಾಕೆಂದರೆ ಮೋಜು ಮಾಡುವವರಂತೆ ವರ್ತಿಸುವ ನಿಮ್ಮ ಪಕ್ಕದಲ್ಲಿರುವವರು ಮುಫ್ತಿಯಲ್ಲಿರುವ ಪೊಲೀಸರಾಗಿರಬಹುದು. ಕಳೆದ ವರ್ಷದಂತೆ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಲು ಪೊಲೀಸರು ನಾಗರಿಕರಂತೆ ವೇಷ ಹಾಕಿಕೊಂಡು ಜನರ ಮಧ್ಯೆ ಬಂದು ತಪಾಸಣೆ ಮಾಡಬಹುದು.
ನಗರದ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಮೋಜು-ಮಸ್ತಿಯಲ್ಲಿ ತೊಡಗುವ ಪ್ರತಿ 17 ಮಂದಿಗೆ ಒಬ್ಬ ಪೊಲೀಸರನ್ನು ನಿಯೋಜಿಸಲು ನಗರ ಪೊಲೀಸ್ ಇಲಾಖೆ ಯೋಜನೆ ಹಾಕಿಕೊಂಡಿದೆ. 500 ಮಂದಿ ಮಹಿಳಾ ಸಿಬ್ಬಂದಿ ಸೇರಿದಂತೆ 2,000 ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಇಲಾಖೆ ಬೆಂಗಳೂರಿನ ಮುಖ್ಯ ಸ್ಥಳಗಳಲ್ಲಿ ನಿಯೋಜಿಸಲಿದೆ. ಇದಕ್ಕೆ ಹೊರತಾಗಿ ಕ್ಯಾಮರಾ ನಿಯೋಜಿತ ಡ್ರೋನ್ ಮತ್ತು ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ವಾಚ್ ಟವರ್ ಮೊದಲಾದವುಗಳನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡಲು ನಿಯೋಜಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯ ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತದೆ. ಚರ್ಚ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿ ಕೂಡ ಕೆಲವು ನಿರ್ಬಂಧಗಳನ್ನು ಹೇರಲಾಗುವುದು ಎಂದು ಸುನೀಲ್ ಕುಮಾರ್ ತಿಳಿಸಿದರು.
ಗುಪ್ರಚರ ಇಲಾಖೆಯ ಸಿಬ್ಬಂದಿ ಮತ್ತು ಸಿವಿಲ್ ಬಟ್ಟೆಯಲ್ಲಿ ಪೊಲೀಸರು ಜನಸಾಮಾನ್ಯರ ನಡುವೆ ಹೊಸ ವರ್ಷಾಚರಣೆ ಸಮಯದಲ್ಲಿ ಸಂಚರಿಸಲಿದ್ದಾರೆ. ನಾಡಿದ್ದು 31ರಂದು ರಾತ್ರಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆ, ಚರ್ಚ್ ರಸ್ತೆಗಳಲ್ಲಿ ಸುಮಾರು 35,000 ಮಂದಿ ಸೇರುವ ಸಾಧ್ಯತೆಯಿದ್ದು ಮಹಿಳೆಯರಿಗೆ ಭದ್ರತೆ ಕಲ್ಪಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಪೊಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.
ಇದೇ ಮೊದಲ ಬಾರಿಗೆ ಹೊಸ ವರ್ಷಾಚರಣೆ ಸಮಯದಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್ ಇಲಾಖೆ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುತ್ತಿರುವುದಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos