ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಹೊಸ ವರ್ಷದಲ್ಲಿ ಪಾರ್ಟಿ ಮಾಡಿ ದುಷ್ಕರ್ಮಿಗಳು ದಾಂಧಲೆ ನಡೆಸುವುದನ್ನು ತಡೆಯಲು ಡಿಸೆಂಬರ್ 31ರಂದು ರಾತ್ರಿ 9 ಗಂಟೆಯಿಂದ ಮರುದಿನ ಸೋಮವಾರ ನಸುಕಿನ ಜಾವದವರೆಗೆ ಎಲ್ಲಾ ವಾಹನಗಳ ಪ್ರವೇಶವನ್ನು ನಿಷೇಧಿಸಲು ಮೈಸೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಜಾಗವನ್ನು ನಿರ್ಬಂಧಿಸಲಾಗುತ್ತಿದ್ದು, ಪ್ರವೇಶ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಕೆಲವು ದುಷ್ಕರ್ಮಿಗಳು ಹೊಸ ವರ್ಷಾಚರಣೆಯೆಂದು ಕುಡಿದು ಬಂದು ವೇಗದಿಂದ ವಾಹನ ಚಲಾಯಿಸುವುದು, ದಾಂಧಲೆ ಮಾಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ಇದರಿಂದ ಅಪಘಾತವಾದ ಪ್ರಕರಣಗಳು ಕೂಡ ಈ ಹಿಂದೆ ನಡೆದಿವೆ ಎನ್ನುತ್ತಾರೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿಕ್ರಮ್ ವಿ.ಅಮತೆ.
ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆತಡೆಯನ್ನು ಅಳವಡಿಸಲಾಗುವುದು. ಸಿಸಿಟಿವಿ ಕ್ಯಾಮರಾಗಳ ಲೈವ್ ಫೂಟೇಜ್ ಗಳನ್ನು ವೃತ್ತಗಳಲ್ಲಿ ನಿಯೋಜಿಸಿ ಪರಿಸ್ಥಿತಿಯನ್ನು ಗಮನಿಸಲಾಗುವುದು ಎಂದು ಹೇಳಿದರು.