ಪ್ರೀತಿ ಗೆಲ್ಹೋಟ್ ಚೂಯಿಂಗ್ ಗಮ್ ಜಗಿಯುತ್ತಿರುವುದು.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಾಡಗೀತೆಗೆ ಅಗೌರವ ತೋರಿದ್ದ ಐಎಎಸ್ ಪ್ರೊಬೇಷನರಿ ಅಧಿಕಾರಿ ಪ್ರೀತಿ ಗೆಲ್ಹೋಟ್ ಅವರನ್ನು ಶುಕ್ರವಾರ ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ನಿನ್ನೆ ತುಮಕೂರು ಜಿಲ್ಲೆಯ ಶಿರಾದ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಭಕ್ಕೂ ಮೊದಲು ನಾಡಗೀತೆ ಹಾಡುವ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವ ಟಿ.ಬಿ ಜಯಚಂದ್ರ, ಎಚ್. ಆಂಜನೇಯ, ಸೇರಿದಂತೆ ಸ್ಥಳೀಯ ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳು ಎದ್ದು ನಿಂತು ಗೌರವ ಸೂಚಿಸುತ್ತಿದ್ದರು.
ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್, ಚೂಯಿಂಗ್ ಗಮ್ ಜಗಿಯುವ ಮೂಲಕ ನಾಡಗೀತೆಗೆ ಅಗೌರವ ತೋರಿದ್ದರು. ಪ್ರೀತಿ ಗೆಲ್ಹೋಟ್ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಸೇವಾವಧಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ರೊಬೇಷನರಿ ಸೇವಾ ಅವಧಿಯಲ್ಲೇ ನಾಡಗೀತೆಗೆ ಅಗೌರವ ತೋರಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಇಂದು ಪ್ರೀತಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.