ನವದೆಹಲಿ: ತೆಂಗು ಮತ್ತು ಕೊಬ್ಬರಿಯ ಬೆಲೆ ಕುಸಿತಗೊಂಡಿರುವುದರಿಂದ ರೈತರು ಕಂಗಾಲಾಗಿದ್ದು, ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಶುಕ್ರವಾರ ಮನವಿ ಮಾಡಿದ್ದಾರೆ.
ನಿನ್ನೆಯಷ್ಟೇ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಅವರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಮನವಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ತೆಂಗು ಮತ್ತು ಕೊಬ್ಬರಿಯ ದರ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದು, ಪ್ರತಿ ಕ್ವಿಂಟರ್ ತೆಂಗಿಗೆ ರೂ.2,500 ಹಾಗೂ ಪ್ರತಿ ಕ್ವಿಂಟಲ್ ಕೊಬ್ಬರಿಗೆ ರೂ.15,000 ಬೆಂಬಲ ಘೋಷಿಸುವ ಮೂಲಕ ರೈತರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದು, ಪ್ರಧಾನಿಯವರಿದೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದ್ದಾರೆ.
ಕೊಬ್ಬರಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಾದ ಕೀಟಗಳ ದಾಳಿ, ಕೃಷಿ ಬಗ್ಗೆ ಅಸಮರ್ಪಕ ತಾಂತ್ರಿಕ ಜ್ಞಾನ, ಹಿಡುವಳಿದಾರರ ಅನುಪಸ್ಥಿತಿ, ಕೀಟ ಮತ್ತು ರೋಗ ಹಾನಿ, ನುರಿತ ಕಾರ್ಮಿಕ ಕೊರತೆ, ಹೆಚ್ಚಿದ ಕಾರ್ಮಿಕ ವೆಚ್ಚ, ಅನಿರೀಕ್ಷಿತ ಹವಾಮಾನ ಪರಿಸ್ಥಿತಿ ಹಾಗೂ ಇನ್ನಿತರೆ ಸಮಸ್ಯೆಗಳ ಕುರಿತಂತೆ ಪ್ರಧಾನಿ ಮೋದಿಯವರ ಬಳಿ ಮಾತನಾಡಿದ್ದೇನೆ. ತೆಂಗು ಬೆಳೆಯ ಮೌಲ್ಯವರ್ಧನೆ ನಿಟ್ಟಿನಲ್ಲಿ ಸಂಸ್ಕರಣಕ್ಕೂ ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರದ ಸ್ಪಂದನೆ ಅಗತ್ಯ ಎಂಬುಗಾದಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.