ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದ ಜಿಂಕೆ ಬೇಟೆ ಪ್ರಕರಣದ ಪ್ರಮುಖ ಆರೋಪಿ ರಫೀಕ್ ಅಹಮದ್ ದೇಶದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಜಿಂಕೆ ಬೇಟೆಯ ಜಾಲದ ಕಿಂಗ್ ಪಿನ್ ಆಗಿರುವ ರಫೀಕ್ ಅಹಮದ್ ಕೊಲಂಬೋ ಮೂಲಕ ದುಬೈ ಗೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ರಫೀಕ್ ಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ ಆದರೂ ಸಹ ರಫೀಕ್ ನ್ನು ಹುಡುಕಲು ಈ ವರೆಗೂ ಸಾಧ್ಯವಾಗಿಲ್ಲ. ಪರಾರಿಯಾಗುವುದಕ್ಕೂ ಮುನ್ನ ರಫೀಕ್ ಜಾಮೀನು ಪಡೆಯಲು ಹಲವು ಬಾರಿ ಪ್ರಯತ್ನಿಸಿರುವುದೂ ಸಹ ಬೆಳಕಿಗೆ ಬಂದಿದೆ. ಆದರೆ ಜಾಮೀನು ಪಡೆಯುವ ಯತ್ನ ವಿಫಲವಾಗಿದ್ದು, ದುಬೈ ಗೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.
ಭದ್ರ ಅಭಯಾರಣ್ಯದ ತನಿಖಾಧಿಕಾರಿ ಎಸಿಎಫ್ ಶರಣುಬಸಪ್ಪ ತನಿಖೆಯನ್ನು ಪೂರ್ಣಗೊಳಿಸುವ ಹಂತ ತಲುಪಿದ್ದು, ಜಿಂಕೆ ಬೇಟೆಗೆ ಸಂಬಂಧಿಸಿದಂತೆ ನಡೆದಿರುವ ತನಿಖೆಯಲ್ಲಿ ರಫೀಕ್ ಬೇಟೆಗಾಗಿ ಹೊರ ರಾಜ್ಯಗಳಿಂದ ಜನರನ್ನು ಕರೆಸುತ್ತಿದ್ದ ಎಂಬುದು ಬಹಿರಂಗವಾಗಿದೆ. ಬೇಟೆಗಾಗಿ ಚಿಕ್ಕಮಗಳೂರು ಜಿಲ್ಲೆಗೆ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ತಂದಿರುವ ಬಗ್ಗೆಯೂ ತನಿಖಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.
ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ತನಿಖೆ ನಡೆಸಲು ಅರಣ್ಯಾಧಿಕಾರಿಗಳು ಈ ಪ್ರಕರಣವನ್ನು ಪೊಲೀಸ್ ಇಲಾಖೆಗೆ ಒಪ್ಪಿಸಲಿದ್ದಾರೆ. ಬೇಟೆ ಜಾಲದ ಕಿಂಗ್ ಪಿನ್ ರಫೀಕ್ ಬೆಂಗಳೂರಿನಲ್ಲಿ ಹಲವು ಪ್ರಭಾವಿ ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿರುವುದೂ ಸಹ ತನಿಖೆ ವೇಳೆ ಬಹಿರಂಗಗೊಂಡಿದೆ.