ರಾಜ್ಯ

ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನ ನಾಳೆ ಆರಂಭ

Sumana Upadhyaya
ಬೆಂಗಳೂರು:  ವಿಧಾನ ಮಂಡಲ ಜಂಟಿ ಅಧಿವೇಶನ ನಾಳೆ ಆರಂಭವಾಗಲಿದೆ. ಬರ ನಿರ್ವಹಣೆ, ಕಾನೂನು ಪಾಲನೆಯಲ್ಲಿ ವಿಫಲ ಮೊದಲಾದ ವಿಷಯಗಳನ್ನಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.
ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ನಾಳೆ ಬೆಳಗ್ಗೆ 11 ಗಂಟೆಗೆ ಭಾಷಣ ಮಾಡಲಿದ್ದಾರೆ. ಬಳಿಕ 15 ನಿಮಿಷಗಳ ಸಭೆ ಬಳಿಕ ಉಭಯ ಸದನಗಳು ಮತ್ತೆ ಸೇರಲಿದ್ದು, ಕಳೆದ ಅಧಿವೇಶನದ ನಂತರ ನಿಧನರಾದವರಿಗೆ ಸಂತಾಪ ಸೂಚಿಸಿ ಮಂಗಳವಾರಕ್ಕೆ ಕಲಾಪ ಮುಂದೂಡಿಕೆಯಾಗಲಿದೆ.
ವರ್ಷದ ಆರಂಭದಲ್ಲಿ ನಡೆಯುವ ಅಧಿವೇಶನವನ್ನು 5 ದಿನಕ್ಕೆ ನಿಗದಿಪಡಿಸುವುದು ಸರಿಯಲ್ಲ, 15 ದಿನ ನಡೆಸುವ ನಿಯಮ ಮಾಡಿಕೊಂಡಿದ್ದರೂ ಅದನ್ನು ಜಾರಿಗೊಳಿಸಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಜಾರಿಗೆ ತಂದ ನಿಯಮ ಪ್ರಕಾರ, ಆರಂಭದ ಅಧಿವೇಶನ 15 ದಿನ, ಬಜೆಟ್ ಅಧಿವೇಶನ 20 ದಿನ, ಮಳೆಗಾಲ 15 ಮತ್ತು ಚಳಿಗಾಲದ ಅಧಿವೇಶನ 10 ದಿನ ಸೇರಿ ಒಟ್ಟು 60 ದಿನ ಕಲಾಪ ನಡೆಸಬೇಕು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗುವುದು ಎಂದರು.
 ವಿರೋಧ ಪಕ್ಷ ಸಜ್ಜು: ರಾಜ್ಯದಲ್ಲಿ 160 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಿದ್ದರೂ ಪರಿಹಾರ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಕೈಗೊಂಡಿಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರ ನಿಷ್ಕಿಯವಾಗಿದೆ ಎಂದು ಆರೋಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ.
SCROLL FOR NEXT