ಬೆಂಗಳೂರು: ಎಟಿಎಂ ಹಂತಕ ಮಧುಕರ್ ರೆಡ್ಡಿ (೩೨) ವಶಕ್ಕಾಗಿ ಶನಿವಾರ ಆಂಧ್ರಪ್ರದೇಶಕ್ಕೆ ತೆರಳಿರುವ ನಗರ ಪೊಲೀಸರು ಮಂಗಳವಾರ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ.
ನವೆಂಬರ್ ೨೦೧೩ ರಲ್ಲಿ ಎನ್ ಆರ್ ವೃತ್ತದ (ಕಾರ್ಪೊರೇಷನ್ ವೃತ್ತ) ಎಟಿಎಂ ನಲ್ಲಿ ಬ್ಯಾಂಕ್ ಸಿಬ್ಬಂದಿ ಜ್ಯೋತಿ ಯಾದವ್ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ರೆಡ್ಡಿಯನ್ನು ಚಿತ್ತೂರು ಪೊಲೀಸರು ಶನಿವಾರ ಬಂಧಿಸಿದ್ದರು. ಈ ಆರೋಪಿ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ರೆಡ್ಡಿಯನ್ನು ವಿಚಾರಣೆಗೆ ಕರೆತರಲು ಮುಂದಿನ ಕ್ರಮಗಳ ಬಗ್ಗೆ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಭಾನುವಾರ ಸಭೆ ನಡೆಸಿದ್ದರು.
ಆರೋಪಿ ಬಂಧನ ಸುದ್ದಿ ತಳಿದ ನಂತರ ಕೇಂದ್ರ ಕ್ರೈಮ್ ಬ್ರಾಂಚ್ ಪೊಲೀಸರು ಶನಿವಾರವೇ ಮದನಪಲ್ಲಿಗೆ ತಲುಪಿದ್ದಾರೆ. ಹಾಗೆಯೇ ವಿಶೇಷ ಪೊಲೀಸ್ ತಂಡ ಕೂಡ ಆಂಧ್ರ ಪ್ರದೇಶಕ್ಕೆ ತೆರಳಿದೆ.
ಹೆಚ್ಚಿನ ವಿಚಾರಣೆಗೆ ವಶಕ್ಕೆ ಒಪ್ಪಿಸುವಂತೆ ಅಧಿಕಾರಿಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಕೂಡ ಆಂಧ್ರ ಪ್ರದೇಶದಲ್ಲಿ ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ರೆಡ್ಡಿಯನ್ನು ಜೈಲಿಗೆ ಹಾಕಲಾಗಿತ್ತಾದರೂ ಅವನು ತಪ್ಪಿಸಿಕೊಂಡು ಜ್ಯೋತಿ ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.