ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ
ಬೆಂಗಳೂರು: ಫೆ.6 ರಿಂದ ವಿಧಾನಮಂಡಲ ಜಂಟಿ ಅಧಿವೇಶನ ಪ್ರಾರಂಭವಾಗಿದ್ದು, ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ರಾಜ್ಯಪಾಲರು, ರಾಜ್ಯ ಸರ್ಕಾರ ಕಳೆದ 4 ವರ್ಷಗಳಿಂದ ಸಮಗ್ರ ಅಭಿವೃದ್ಧಿಗಾಗಿ ಯೋಜನೆ ಜಾರಿಗೊಳಿಸಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಬಡವರು, ದುರ್ಬಲ ವರ್ಗದ ಪರವಾಗಿದ್ದು, ಅಭಿವೃದ್ಧಿಗೆ ಸಮರ್ಥ ಕ್ರಮ ಕೈಗೊಂಡಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಫಲವಾಗಿದೆ ಎಂದು ತಿಳಿಸಿದ್ದಾರೆ. ನೆಲ, ಜಲ, ಭಾಷೆಯ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕಾವೇರಿ ಮಹದಾಯಿ ಜಲಹಂಚಿಕೆ ವಿವಾದಗಳನ್ನು ಎದುರಿಸಿರುವ ರಾಜ್ಯ ಸರ್ಕಾರ ರಾಜ್ಯದ ಪಾಲಿಗೆ ಸಿಗಬೇಕಿರುವ ಪಾಲನ್ನು ನ್ಯಾಯಯುತವಾಗಿ ಪಡೆಯುವುದಕ್ಕೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಸರ್ವರಿಗೂ ನ್ಯಾಯ ಒದಗಿಸಲು, ಸರ್ವಾಂಗೀಣ ಅಭಿವೃದ್ಧಿಕೆ ಸರ್ಕಾರ ಈ ವರೆಗೂ ಹಲವು ಕ್ರಮ ಕೈಗೊಂಡಿದ್ದು, ಭ್ರಷ್ಟಾಚಾರ ನಿಗ್ರಹ ಉದ್ದೇಶದಿಂದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸ್ಥಾಪಿಸಿದೆ. ರಾಜ್ಯ ಸರ್ಕಾರ ಹೈದರಾಬಾದ್-ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದ್ದು, 1 ಸಾವಿರ ಕೋಟಿ ರೂ ಮೀಸಲಿರಿಸಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಭೀಕರ ಬರಗಾಲ, ಬರಪೀಡಿತ ತಾಲೂಕುಗಳಿಗೆ 1195 ಕೋಟಿ ಬಿಡುಗಡೆ:
2016 ರಲ್ಲಿ ರಾಜ್ಯ ಭೀಕರ ಬರಗಾಲ ಎದುರಿಸಿದ್ದು, ಬರಪೀಡಿತ ತಾಲೂಕುಗಳಿಗೆ 1195 ಕೋಟಿ ಬಿಡುಗಡೆ ಮಾಡಲಾಗಿದೆ. ಬೆಳೆ ಸಹಾಯಧನವನ್ನು ವಿತರಣೆ ಮಾಡಿ, ಬೆಳೆ ವಿಮೆ ಯೋಜನೆಯಡಿಯಲ್ಲಿ 10.5 ಲಕ್ಷ ರೈತರ ನೋಂದಣಿಯಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಬರಗಾಲವನ್ನು ಪರಿಣಾಮಕಾರಿಯಾಗಿ ಎದುರಿಸಿದೆ. ಕಳೆದ ವರ್ಷದಲ್ಲಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದ್ದು, 2016-17 ನೇ ವರ್ಷದಲ್ಲಿ 1,49, 587 ಕೋಟಿ ರೂಪಾಯಿ ಹೂಡಿಕೆಯಾಗಿದೆ ಎಂದು ರಾಜ್ಯಪಾಲರು ಸರ್ಕಾರದ ಅಭಿವೃದ್ಧಿ ಕ್ರಮಗಳನ್ನು ಶ್ಲಾಘಿಸಿದ್ದಾರೆ.