ಬೆಂಗಳೂರು: ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಬೇಕು ಎಂಬ ಒತ್ತಾಯಕ್ಕೆ ಸರ್ಕಾರ ಮಣಿಯುತ್ತಿಲ್ಲ ಎಂದು ಪ್ರತಿಭಟಿಸಿ ಬಿಜೆಪಿ ಶಾಸಕರು ಜಗದೀಶ ಶೆಟ್ಟರ್ ನೇತೃತ್ವದಲ್ಲಿ ವಿಧಾನಸಭೆಯಿಂದ ಸೋಮವಾರ ಸಭಾತ್ಯಾಗ ಮಾಡಿದರು.
ಜಾರಕಿಹೊಳಿ ಮನೆ, ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ(ಐ.ಟಿ)ದಾಳಿ ನಡೆಸಿದಾಗ ರು 162 ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿದೆ. ಇದನ್ನು ಜಾರಕಿಹೊಳಿ ಅವರೇ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ನಿಲುವಳಿ ಸೂಚನೆಗೆ ಅವಕಾಶ ಕೊಡಬೇಕು ಎಂದು ಶೆಟ್ಟರ್ ಅವರು ಸೋಮವಾರ ಬೆಳಿಗ್ಗೆ ಪ್ರಸ್ತಾವ ಸಲ್ಲಿಸಿದ್ದರು.
ರಾಜ್ಯ ಸರ್ಕಾರ ಇದಕ್ಕೆ ಉತ್ತರ ನೀಡಲು ಬರುವುದಿಲ್ಲ ಎಂಬ ಕಾರಣಕ್ಕೆ ಈ ವಿಷಯವನ್ನು ನಿಯಮ 69ರ ಅಡಿ ಮಂಡಿಸಲು ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವಕಾಶ ಕಲ್ಪಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದರು.