ಹುಬ್ಬಳ್ಳಿ: ಕಳೆದ ವಾರ ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ತೊಡೆಯ ಎಲುಬು ಮುರಿತಕ್ಕೆ ಒಳಗಾಗಿದ್ದ ಪೈಲ್ವಾನ್ ಸಂತೋಷ ಹೊಸಮನಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಸಂತೋಷ ಅವರಿಗೆ ತಂದೆ, ತಾಯಿ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಇದ್ದಾರೆ. ಫೆಬ್ರುವರಿ ಎಂಟರಂದು ರಾತ್ರಿ ರಾಜ್ಯ ಒಲಿಂಪಿಕ್ಸ್‌ನ 97 ಕೆಜಿ ವಿಭಾಗದ ಗ್ರೀಕೊ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ದಾವಣಗೆರೆಯ ಮಹಮ್ಮದ್ ಅಲಿ ವಿರುದ್ಧ ಸೆಣಸುತ್ತಿದ್ದಾಗ ಅವರ ತೊಡೆಯ ಎಲುಬು ಮುರಿದಿತ್ತು.
ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅಂದೇ ರಾತ್ರಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ಕೂಡ ನೆರವೇರಿಸಿದ್ದರು, ಅದಾದ ನಂತರ, ಸಂತೋಷ್ ಆಸ್ಪತ್ರೆಗೆ ಬಂದಿದ್ದ ತಮ್ಮ ಸಂಬಂಧಿಕರ ಜೊತೆ ಮಾತನಾಡಿದ್ದರು.
ಮುರಿತಕ್ಕೆ ಒಳಗಾದ ಎಲುಬಿನಿಂದ ಕೊಬ್ಬಿನ ಅಂಶ ರಕ್ತದಲ್ಲಿ ಸೇರಿಕೊಂಡು ಹೃದಯಕ್ಕೆ ರಕ್ತ ಪೂರೈಕೆಯಾಗದೆ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಂತೋಷ ಅವರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರು. ಪರಿಹಾರ ಘೋಷಣೆ ಮಾಡಿದ್ದು, ಅವರ ಸಹೋದರನಿಗೆ ಉದ್ಯೋಗದ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದ ಜಿಲ್ಲಾಡಳಿತ ತಿಳಿಸಿದೆ.