ಬೆಂಗಳೂರು: ಪದ್ಮನಾಭನಗರದ ದೇವೇಗೌಡ ಪೆಟ್ರೋಲ್ ಬಂಕ್ ಪಕ್ಕ ನಿರ್ಮಾಣ ಮಾಡಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಮೇಲ್ಸೇತುವೆ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ. ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಾರ್ವಜನಿಕರಿಗೆ ಸಮರ್ಪಿಸಿದರು.
2014ರಲ್ಲಿ ಶಂಕುಸ್ಥಾಪನೆ ನಡೆಸಿ ಕಾಮಗಾರಿ ಮುಗಿಸಲು 18 ತಿಂಗಳ ಕಾಲ ಸಮಯಾವಕಾಶವನ್ನು ನೀಡಲಾಗಿತ್ತು. ಕಾಮಗಾರಿ ವಿಳಂಬಂದಿಂದಾಗಿ ಎರಡು ವರ್ಷಕ್ಕೂ ಹೆಚ್ಚು ಸಮಯ ಪಡೆದ ಗುತ್ತಿಗೆದಾರರು 2017ರ ಜನವರಿ 31ಕ್ಕೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮುಗಿಸಿದ್ದರು. ಕಾಮಗಾರಿ ಮುಗಿದು ಹಲವು ದಿನಗಳು ಕಳೆದರೂ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳದೆ ಕಾಯುತ್ತಿತ್ತು. ಸಂಚಾರ ದಟ್ಟಣೆಯಿಂದಾಗಿ ಸಾಕಷ್ಟು ಬೇಸತ್ತು ಹೋಗಿದ್ದ ಜನತೆ ಮೇಲ್ಸೇತುವೆಗಾಗಿ ಕಾದು ಕುಳಿತಿದ್ದರು. ಮೂರು ವರ್ಷಗಳ ಬಳಿಕ ಕೊನೆಗೂ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಂಡಿದೆ.
ಪದ್ಮನಾಭನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಉಂಟಾಗುತ್ತಿದ್ದ ಸಂಚಾರದಟ್ಟಣೆ ನಿವಾರಣೆಗಾಗಿ ರೂ. 35.8 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ನಿರ್ಮಿಸಿರುವ 4 ಪಥದ ಮೇಲ್ಸೇತುವೆಯನ್ನು ಮುಖ್ಮಮಂತ್ರಿ ಸಿದ್ದರಾಮಯ್ಯ ಅವರು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದರು.
ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಣಿ ಚೆನ್ನಮ್ಮ ಮೇಲ್ಸೇತುವೆ ಮಾದರಿಯಲ್ಲೇ ನಾಯಂಡಹಳ್ಳಿ ಹಾಗೂ ಬನ್ನೇರುಘಟ್ಟ ನಡುವಿನ ಹೊರವರ್ತುಲ ರಸ್ತೆಯನ್ನು ಸಿಗ್ನಲ್ ಮುಕ್ತಗೊಳಿಸಲು ಆಯ್ದ ಐದು ಪ್ರಮುಖ ಜಂಕ್ಷನ್ ಗಳಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದರು.
ದೇವೇಗೌಡ ಪೆಟ್ರೋಲ್ ಬಂಕ್ ಬಳಿ ನಿರ್ಮಿಸಿರುವ 367 ಮೀಟರ್ ಉದ್ದದ 4 ಪಥದ ಮೇಲ್ಸೇತುವೆಯಿಂದಾಗಿ ಇಲ್ಲಿನ ಸಂಚಾರದಟ್ಟಣೆ ಶೇ.68 ರಷ್ಟು ಕಡಿಮೆಯಾಗಲಿದೆ. ಇದೇ ರೀತಿ ಅಗತ್ಯವಿರುವ ಅಯ್ದ ಸ್ಥಳಗಳಲ್ಲಿ ಕೆಲ ಹಾಗೂ ಮೇಲ್ಸೇತುವೆ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಹೊಸಕೆರೆಹಳ್ಳಿ ವೃತ್ತ ಸೇರಿದಂದೆ 3 ಕಾಮಗಾರಿ ಆರಂಭವಾಗಿದ್ದು, ಇನ್ನು ಒಂದು ತಿಂಗಳಲ್ಲಿ ಹೊಸಕೆರೆಹಳ್ಳಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಭರವಸೆ ನೀಡಿದರು.
ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದ ವೇಳೆ ಉಂಟಾದ ಸಂಚಾರದಟ್ಟಣೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿತ್ತು. ಬೆಳಗಿನ ಸಮಯದಲ್ಲಿ ಜಂಕ್ಷನ್ ಬಳಿ ಸಾಕಷ್ಟು ಸಂಚಾರ ದಟ್ಟಣೆ ಇರುತ್ತದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಬರುವ ಕಾರಣ ಸಾಕಷ್ಟು ಜನರು ಸ್ಥಳಕ್ಕೆ ಬಂದಿದ್ದರು. ರಾಜಕೀಯ ನಾಯಕರು ಹಾಗೂ ಅವರ ಬೆಂಬಲಿಗರು ಕಾರಿಗಳಲ್ಲಿ ಬಂದಿದ್ದರು. ಇದರಿಂದ ಸ್ಥಳದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು. ಟ್ರಾಫಿಕ್ ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ನಿಲ್ಲುವಂತಾಗಿತ್ತು ಎಂದು ಸ್ಥಳೀಯ ಶಿವಶಂಕರ್ ಅವರು ಹೇಳಿದ್ದಾರೆ.