ರಾಜ್ಯ

ಜೈಲು ಪಾಲಾಗಿರುವ ಶಶಿಕಲಾ ಮೇಲೆ ಹಲ್ಲೆಗೆ ಸಹ ಕೈದಿಗಳ ಸಂಚು?: ಗುಪ್ತಚರ ಇಲಾಖೆ ಎಚ್ಚರಿಕೆ

Srinivasamurthy VN

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ವಿಕೆ ಶಶಿಕಲಾ ಅವರ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಹಲ್ಲೆಯಾಗುವ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ಪತ್ರಿಕೆಯೊಂದು ವರದಿ ಮಾಡಿರುವಂತೆ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಕೆ ಶಶಿಕಲಾ ಅವರ ಮೇಲೆ ಅದೇ ಜೈಲಿನಲ್ಲಿರುವ ತಮಿಳು ಕೈದಿಗಳು ಹಲ್ಲೆ ಮಾಡುವ ಸಾಧ್ಯತೆ ಇದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ  ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ಶಶಿಕಲಾ ವಿರುದ್ಧ ತಮಿಳರು ತೀವ್ರ ಆಕ್ರೋಶಗೊಂಡಿದ್ದು, ಇದೇ ಕಾರಣದಿಂದ ಜೈಲಿನಲ್ಲಿರುವ ತಮಿಳು ಕೈದಿಗಳು ಶಶಿಕಲಾ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿವೆ ಎಂದು  ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶಶಿಕಲಾ ಸೆಲ್ ಪಕ್ಕದಲ್ಲೇ ಇದೇ ಸರಣಿ ಹಂತಕಿ ಸೈನೈಡ್ ಮಲ್ಲಿಕಾ ಸೆಲ್!
ಇನ್ನು ಪ್ರಸ್ತುತ ಶಶಿಕಲಾರನ್ನು ಇರಿಸಲಾಗಿರುವ ಪರಪ್ಪನ ಅಗ್ರಹಾರ ಜೈಲಿನ ಸೆಲ್ ಪಕ್ಕದಲ್ಲಿಯೇ ಸರಣಿ ಹಂತಕಿ ಸೈನೈಡ್ ಮಲ್ಲಿಕಾ ಸೆಲ್ ಕೂಡ ಇದೆ ಎಂದು ತಿಳಿದುಬಂದಿದೆ. ಈ ಹಿಂದೆ ಸೈನೈಡ್ ನೀಡಿ ಹಲವರನ್ನು ಕೊಂದು  ಮಲ್ಲಿಕಾ ಅಲಿಯಾಸ್ ಸೈನೈಡ್ ಮಲ್ಲಿಕಾ ಶಿಕ್ಷೆಗೆ ಗುರಿಯಾಗಿದ್ದಾರೆ.

ಜೈಲು ಬದಲಾವಣೆಗೆ ಅಪರಾಧಿಗಳ ಮನವಿ
ಏತನ್ಮಧ್ಯೆ ತಮಗೆ ನೀಡಿರುವ ಸೆಲ್ ಗಳನ್ನು ಬದಲಾವಣೆ ಮಾಡುವಂತೆ ಶಶಿಕಲಾ, ಇಳವರಸಿ ಮತ್ತು ಸುಧಕಾರನ್ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಜೈಲು ಪ್ರವಾಸದ ಮೊದಲ ದಿನ ಮೂವರೂ ಸಹ  ಸರಿಯಾಗಿ ನಿದ್ರೆ ಮಾಡಿರಲಿಲ್ಲವಂತೆ. ಅಲ್ಲದೆ ಶಶಿಕಲಾ ಜೈಲು ಅಧಿಕಾರಿಗಳು ನೀಡಿದ ಸಮವಸ್ತ್ರವನ್ನೂ ಕೂಡ ಧರಿಸಲಿಲ್ಲ. ಮಧ್ಯರಾತ್ರಿ ಇಳವರಿಸಿ ಬಲವಂತ ಮಾಡಿದ ಬಳಿಕ ಮೊಸರನ್ನ ಸೇವಿಸಿದರು ಎಂದು ಮೂಲಗಳು  ತಿಳಿಸಿವೆ.

SCROLL FOR NEXT