ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡ ಬೆಂಕಿ
ಮೈಸೂರು:ಬಂಡೀಪುರ ರಾಷ್ಟ್ರೀಯ ಅರಣ್ಯದಲ್ಲಿ ಶನಿವಾರ ಕಾಡ್ಗಿಚ್ಚು ಹತ್ತಿಕೊಂಡು ಉರಿದು ಸುಮಾರು 750 ಎಕರೆ ಪ್ರದೇಶ ಬೂದಿಯಾಗಿದೆ. ಸತತ 24 ಗಂಟೆಗಳ ಕಾರ್ಯಾಚರಣೆಯಿಂದ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಸುಮಾರು 600 ಮಂದಿ ಮತ್ತು 6 ಟ್ಯಾಂಕರ್ ನೀರು ಸುರಿದು ಬೆಂಕಿಯನ್ನು ಆರಿಸಲಾಯಿತು. ಹುಲಿ ಅಭಯಾರಣ್ಯದ ಕಲ್ಕರೆ ರೇಂಜ್ ಅರಣ್ಯದಲ್ಲಿ ಬೆಂಕಿಯ ಜ್ವಾಲೆ ವ್ಯಾಪಿಸಿ ಅದನ್ನು ಆರಿಸಲು ಹೋದ 28 ವರ್ಷದ ಅರಣ್ಯ ಭದ್ರತಾ ಸಿಬ್ಬಂದಿ ಮುರಿಗೆಪ್ಪ ತಮ್ಮಂಗೊಲ್ ಮೃತಪಟ್ಟಿದ್ದರು. ರೇಂಜ್ ಅರಣ್ಯ ಅಧಿಕಾರಿ ಸೇರಿದಂತೆ ನಾಲ್ವರಿಗೆ ಗಾಯಗಳಾಗಿದ್ದವು.
ಬೆಂಕಿಯನ್ನು ಆರಿಸಲು ಸುತ್ತಮುತ್ತಲ ಚಾಮರಾಜನಗರ, ಬಿಳಿಗಿರಿರಂಗ ಬೆಟ್ಟ ಹುಲಿ ಅಭಯಾರಣ್ಯದ ಸಿಬ್ಬಂದಿಯನ್ನು ಕೂಡ ಕರೆಸಿಕೊಂಡಿದ್ದರು. ಸೋಲಿಗ ಬುಡಕಟ್ಟು ಜನಾಂಗದವರು ಕೂಡ ಬಂದಿದ್ದರು. ಎಲ್ಲರೂ ಸೇರಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು.
ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಬಿ.ಜಿ.ಹೊಸ್ಮಟ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ 3.30ರವರೆಗೆ ಕಾರ್ಯಾಚರಣೆ ನಡೆಸಿ ಬೆಳಗ್ಗೆ 8.30ಕ್ಕೆ ಬೆಂಕಿ ನಂದಿಸಲು ಸಾಧ್ಯವಾಯಿತು.ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಫೈರ್ ಲೈನ್ ತರಿಸಲಾಯಿತು ಎಂದು ವಿವರಿಸಿದರು.
ಬೆಂಕಿ ಹತ್ತಿಕೊಂಡದ್ದರ ಹಿಂದೆ ಕೆಬ್ಬೆಪುರ ಹಾಡಿಯ ದುಷ್ಕರ್ಮಿಗಳ ಕೈವಾಡವಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ.