ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರನ್ನು ನ್ಯಾಯಾಂಗದ ವಶಕ್ಕೆ ಕಳುಹಿಸಿದ್ದ ನ್ಯಾ. ಎನ್ ಕೆ ಸುಧೀಂದ್ರ ರಾವ್ ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಬ್ರೋ ಕಮಲ್ ಮುಖರ್ಜಿ, ಎನ್ ಕೆ ಸುದೀಂದ್ರ ರಾವ್ ಮತ್ತು ಎಚ್. ಬಿ ಪ್ರಭಾಕರ ಶಾಸ್ತ್ರಿ ಅವರಿಗೆ ಇಂದು ಪ್ರಮಾಣ ವಚನ ಬೋಧಿಸಿದರು.
ಸುಧೀಂದ್ರ ರಾವ್ ಅವರು ಈ ಹಿಂದೆ ಲೋಕಾಯುಕ್ತ ಕೋರ್ಟ್ ನ ವಿಶೇಷ ಜಡ್ಜ್ ಆಗಿದ್ದರು. ಆ ವೇಳೆ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವರುಗಳಾದ ಕಟ್ಟಾ ಸುಬ್ರಮಣ್ಯನಾಯ್ಡು, ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಹಲವು ಹೈ ಪ್ರೊಫೈಲ್ ನಾಯಕರುಗಳನ್ನು ಜೈಲಿಗೆ ಕಳುಹಿಸಿದ್ದ ಕೀರ್ತಿ ಸುಧೀಂದ್ರ ರಾವ್ ಅವರದ್ದು.
ಅದಾದ ನಂತರ ಸುಧೀಂದ್ರ ರಾವ್ ಹೈಕೋರ್ಟ್ ರಿಜಿಸ್ಟ್ರಾರ್ ಆಗಿ ನೇಮಕವಾಗಿದ್ದರು, ಪ್ರಭಾಕರ್ ಶಾಸ್ತ್ರಿ ಕರ್ನಾಟಕ ಸಾರಿಗೆ ಇಲಾಖೆ ಮೇಲ್ಮನವಿ ಪ್ರಾಧಿಕಾರದ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಸುಧೀಂದ್ರ ರಾವ್ ಮತ್ತು ಪ್ರಭಾಕರ್ ಶಾಸ್ತ್ರಿ ಅವರ ನೇಮಕದಿಂದಾಗಿ ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರುಗಳು ಸಂಖ್ಯೆ 32 ಕ್ಕೇರಿದೆ. ಇನ್ನೂ 30 ನ್ಯಾಯಪೀಠಗಳ ಹುದ್ದೆ ಖಾಲಿ ಇವೆ. ಆ ಹುದ್ದೆಗಳಿಗೂ ನೇಮಕವಾದರೆ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 62ಕ್ಕೇರಲಿದೆ.