ಹುಬ್ಬಳ್ಳಿ: ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ವೀರ ಯೋಧ ಹನುಂತಪ್ಪ ಕೊಪ್ಪದ್ ಅವರ ಪತ್ನಿಗೆ ಸರ್ಕಾರ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಂದೇಶಗಳು ಹರಿದುಬರುತ್ತಿವೆ.
ಎಸ್ಎಸ್ಎಲ್ ಸಿ ಮುಗಿಸಿದ ಮಹದೇವಿಗೆ ಅಂಗನವಾಡಿ ಶಿಕ್ಷಕಿಯಾಗಿ ಉದ್ಯೋಗ ನೀಡುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ ಟ್ವೀಟ್ ಮಾಡಿದ ನಂತರ ಹಲವರು ಉದ್ಯೋಗ ನೀಡಲು ಮಹಾದೇವಿಯವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ ಹನುಮಂತಪ್ಪ ಕೊಪ್ಪದ ಅವರ ಮೊದಲ ವರ್ಷದ ತಿಥಿ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ರಾಜ್ಯ ಸರ್ಕಾರ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು, ಇದುವರೆಗೆ ನೀಡಿಲ್ಲ. ಕಾಯುತ್ತಿರುವುದಾಗಿ ಹೇಳಿದ್ದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹನುಮಂತಪ್ಪ ಅವರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಅದು ಇಲ್ಲಿಯವರೆಗೆ ಭರವಸೆಯಾಗಿಯೇ ಉಳಿದಿದೆ.
ಮಾಜಿ ಜಿಲ್ಲಾಧಿಕಾರಿ ರಾಜೇಂದ್ರ ಚೋಲನ್ ಅವರ ವರ್ಗಾವಣೆಯ ನಂತರ ಮಹಾದೇವಿಯವರು ಸಲ್ಲಿಸಿದ್ದ ದಾಖಲೆಗಳು ಕಚೇರಿಯಿಂದ ಕಳೆದುಹೋಗಿದೆಯಂತೆ.
''ನನಗೆ ಇದೀಗ ಅನೇಕ ಉದ್ಯೋಗದ ಅವಕಾಶಗಳು ಬರುತ್ತಿವೆ. ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಕೆಲಸ ಮಾಡಲು ನನಗೆ ಆಸೆಯಿದ್ದು ಮಗಳ ಜೊತೆ ಉತ್ತಮ ಬಾಳ್ವೆ ನಡೆಸಬೇಕೆಂದಿದ್ದೇನೆ ಎನ್ನುತ್ತಾರೆ ಮಹಾದೇವಿ.
ಸ್ಥಳೀಯ ಶಾಸಕ ಸಿ.ಎಸ್.ಶಿವಳ್ಳಿ, ಕೆಲವು ತಾಂತ್ರಿಕ ಕಾರಣಗಳಿಂದ ಮಹಾದೇವಿಯವರಿಗೆ ಉದ್ಯೋಗ ನೀಡಲು ತೊಂದರೆಯಾಗುತ್ತಿದೆ. ಇನ್ನು 15 ದಿನಗಳಲ್ಲಿ ಅವರಿಗೆ ಸೂಕ್ತ ಉದ್ಯೋಗ ನೀಡಲಾಗುವುದು ಎಂದು ಹೇಳುತ್ತಾರೆ.