ಬೆಂಗಳೂರು: ಬಹು ನಿರೀಕ್ಷಿತ ಬೆಂಗಳೂರು–ಮೈಸೂರು ಹೆದ್ದಾರಿ ಮೇಲ್ದರ್ಜೆ ಯೋಜನೆಯಿಂದಾಗಿ ಈ ರಸ್ತೆಯಲ್ಲಿರುವ ಸುಮಾರು 800 ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಹೇಳಲಾಗುತ್ತಿದೆ.
ಒಂದು ಕಾಲದಲ್ಲಿ ಪುಟ್ಟ ಕಾನನದಂತಿದ್ದ ಮೈಸೂರು-ಬೆಂಗಳೂರು ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 275) ಇದೀಗ ಮರಗಳ ಇಲ್ಲದೇ ಬರಿದಾಗಿದ್ದು, ಅಳಿದುಳಿದಿರುವ ಅಲ್ಪ ಪ್ರಮಾಣದ ಮರಗಳನ್ನು ಕೂಡ ಅಭಿವೃದ್ಧಿ ಹೆಸರಲ್ಲಿ ಕಡಿದು ಹಾಕಲಾಗುತ್ತಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ ಪ್ರಸ್ತುತ ಇರುವ ಹೆದ್ದಾರಿಯನ್ನು ದಶಪಥ ಹೆದ್ದಾರಿಯನ್ನಾಗಿ ಮಾರ್ಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದ್ದು, ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲೂ ಕೂಡ ನಿರ್ಧರಿಸಲಾಗಿದೆ. ಒಂದು ವೇಳೆ ಈ ಕಾಮಗಾರಿ ಆರಂಭವಾಗಿದ್ದೇ ಆದರೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸುಮಾರು 800 ಮರಗಳ ಮಾರಣ ಹೋಮ ನಡೆಯಲಿದೆ. ಇದೇ ಮಾರ್ಚ್ ತಿಂಗಳಲ್ಲಿ ಟೆಂಡರ್ ನಡೆಯಲಿದ್ದು, ಏಪ್ರಿಲ್ ಅಥವಾ ಮೇ ತಿಂಗಳಿನಿಂದ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಅಘಾತಕಾರಿ ಅಂಶವೆಂದರೆ ಈ 800 ಮರಗಳ ಪೈಕಿ ಹಲವು ಮರಗಳು 100 ವರ್ಷಕ್ಕೂ ಹಳೆಯ ಮರಗಳಾಗಿವೆ. ಇನ್ನು ಈ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರು-ಮೈಸೂರು ನಡುವಿನ ಮೂರು ಗಂಟೆಗಳ ಸಂಚಾರ ಕೇವಲ 90 ನಿಮಿಷಕ್ಕೆ ಇಳಿಯಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಗೆ ಸುಮಾರು 4,100 ವೆಚ್ಚ ತಗುಲುವ ನಿರೀಕ್ಷೆ ಇದ್ದು, ಈಗಾಗಲೇ ರಸ್ತೆಗಾಗಿ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ. 2400 ಕೋಟಿ ರು.ಮೌಲ್ಯದ 1300 ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಪೈಕಿ 1,100 ಎಕರೆ ಪ್ರದೇಶ ಖಾಸಗಿಯವರದ್ದಾಗಿದೆ. ಈಗಾಗಲೇ ಸರ್ಕಾರ ಭೂಮಿ ಮಾಲೀಕರಿಗೆ ಹಣ ನೀಡುತ್ತಿದ್ದು, ಕೆಲವೇ ದಿನಗಳಲ್ಲಿ ಈ ಕಾರ್ಯ ಕೂಡ ಪೂರ್ಣವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಲಂದರ್ ಕುಮಾರ್ ತಿಳಿಸಿದ್ದಾರೆ.