ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ
ಬೆಂಗಳೂರು: ಜನವರಿ 1ರಂದು ಕಮ್ಮನಹಳ್ಳಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆ ನಾಪತ್ತೆಯಾಗಿದ್ದು ಪ್ರಕರಣದ ತನಿಖೆಗೆ ಪೊಲೀಸರಿಗೆ ಸಹಕಾರ ನೀಡದೇ ಇರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಪ್ರಕರಣದ ನಂತರ ಸಂತ್ರಸ್ತ ಯುವತಿ ಪೊಲೀಸರಿಗೆ ಮಾಹಿತಿ ನೀಡದೆ ಮನೆ ಖಾಲಿ ಮಾಡಿದ್ದಾಳೆ. ಜತೆಗೆ ತಾನು ಎಲ್ಲಿ ನೆಲೆಸಿದ್ದೇನೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡದಿರುವುದು ಪ್ರಕರಣದ ತನಿಖೆಗೆ ಭಾರೀ ಹಿನ್ನಡೆಯಾಗಿದೆ.
ಪ್ರಕರಣ ನಡೆದ ಒಂದು ವಾರದೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕಳೆದೆರೆಡು ಬಾರಿ ಆರೋಪಿಗಳ ಗುರುತು ಪತ್ತೆ ಹಚ್ಚುಲು ಸಂತ್ರಸ್ತ ಯುವತಿ ಹಾಜರಾಗದ ಕಾರಣ ಎರಡು ಬಾರಿ ಪೆರೇಡ್ ರದ್ದಾಗಿತ್ತು. ಇದೀಗ ಮೂರನೇ ಬಾರಿಗೆ ಇಂದು ದಿನಾಂಕ ನಿಗದಿಯಾಗಿದ್ದ ಈ ಬಾರಿಯು ಯುವತಿ ಪೆರೇಡ್ ಗೆ ಹಾಜರಾಗದೆ ಇದ್ದಲ್ಲಿ ಚಾರ್ಚ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಇನ್ನು ಸಿಸಿಟಿವಿ ದೃಶ್ಯಾವಳಿಗಳಿಗೆ ಸಂಬಂಧಿಸಿದಂತೆ ಪ್ರಶಾಂತ್ ಫ್ರಾನ್ಸಿಕ್ಸ್ ರನ್ನು ಪೊಲೀಸರು ಸಂಪರ್ಕಿಸಿದ್ದು ಅದಕ್ಕೆ ಪ್ರಶಾಂತ್ ಅವರು ಪ್ರಕರಣ ಸಂಬಂಧ ದೃಶ್ಯಾವಳಿಗಳು ನಮ್ಮ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದಾಗಿ ಈ ಹಿಂದೆಯೇ ಪೊಲೀಸರಿಗೆ ಹೇಳಿಕೆ ನೀಡಿದ್ದೇನೆ. ಈ ಪ್ರಕರಣದಲ್ಲಿ ನಾನು ಪ್ರತ್ಯಕ್ಷದರ್ಶಿಯಲ್ಲ ಹೀಗಾಗಿ ಗುರುತ ಪತ್ತೆ ಪೆರೇಡ್ ಗೆ ತಾವು ಬರುವುದಿಲ್ಲ ಎಂದು ಹೇಳಿದ್ದಾರೆ.
ಜನವರಿ ಬೆಳಗಿನ ಜಾವ 2:15ರ ಸುಮಾರಿನಲ್ಲಿ ಎಂಜಿ ರಸ್ತೆಯಲ್ಲಿ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವತಿಯನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ದೃಶ್ಯ ಅಲ್ಲಿಯೇ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಬಾಣಸವಾಡಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಅಯ್ಯಪ್ಪ, ಲೆನೋ, ಸುದೇಶ್, ಜೇಮ್ಸ್, ಸೋಮಶೇಖರ್ ಮತ್ತು ಜಾರ್ಜ್ ಎಂಬುವರನ್ನು ಬಂಧಿಸಿದ್ದು ಇದೀಗ ಆರೋಪಿಗಳು ಖುಲಾಸೆಯಾಗುವ ಆಂತಕ ಎದುರಾಗಿದೆ.