ರಾಜ್ಯ

ಬೆಂಗಳೂರಿನ ಆರ್ ಬಿಐ ಕಚೇರಿಯಲ್ಲಿ ಹಳೆ ನೋಟುಗಳನ್ನು ಬದಲಿಸಲು ಸಾಧ್ಯವಿಲ್ಲ

Shilpa D

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ಗಳಲ್ಲಿ ಮಾರ್ಚ್‌ 31ರವರೆಗೂ ರದ್ದಾದ ಅಧಿಕ ಮುಖಬೆಲೆ ನೋಟುಗಳನ್ನು ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಹಳೆ ನೋಟುಗಳನ್ನು ಬದಲಿಸಿಕೊಳ್ಳಲು ಸೋಮವಾರ ನಗರದ ರಿಸರ್ವ್‌ ಬ್ಯಾಂಕ್‌ ಕಚೇರಿಗೆ ಸಾರ್ವಜನಿಕರು ಬಂದಿದ್ದರು.

200ಕ್ಕೂ ಹೆಚ್ಚು ಜನ  ಸುಮಾರು ಮೂರು ತಾಸಿನಿಂದ ಕಚೇರಿ ಎದರು ಕಾಯುತ್ತಿದ್ದರೂ ಅಧಿಕಾರಿಗಳು ಯಾವುದೇ ವಿಷಯ ತಿಳಿಸಿಲ್ಲ. ನಂತರ, ಹಳೆ ನೋಟುಗಳ ಬದಲಾವಣೆ ಇಲ್ಲ ಎನ್ನುವ ಪತ್ರವನ್ನು ಗೇಟಿಗೆ ಹಚ್ಚಿದರು. ಇದರಿಂದ ರೊಚ್ಚಿಗೆದ್ದ ಜನರು ಅಧಿಕಾರಿಗಳೊಂದಿಗೆ ಗಲಾಟೆ ಪ್ರಾರಂಭಿಸಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.  

ರಿಸರ್ವ್‌ ಬ್ಯಾಂಕ್‌ಗಳಲ್ಲಿ ಮಾರ್ಚ್‌ 31ರವರೆಗೂ ರದ್ದಾದ ಅಧಿಕ ಮುಖಬೆಲೆ ನೋಟುಗಳನ್ನು ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದರಿಂದ ಈ ಗೊಂದಲ ಉಂಟಾಗಿದೆ. ವಿದೇಶದಲ್ಲಿರುವ ಭಾರತೀಯರಿಗೆ ಮಾರ್ಚ್‌ 31ರವರೆಗೆ ಹಾಗೂ ಅನಿವಾಸಿ ಭಾರತೀಯರಿಗೆ ಜೂನ್‌ 30ರವೆರೆಗೆ ರಿಸರ್ವ್‌ ಬ್ಯಾಂಕ್‌ನಲ್ಲಿ ಹಣ ಬದಲಾವಣೆಗೆ ಅವಕಾಶ ನೀಡಲಾಗಿತ್ತು.ಆದರೆ, ಮುಂಬೈ, ಕೋಲ್ಕತ್ತಾ, ಚೆನ್ನೈ, ದೆಹಲಿ ಮತ್ತು ನಾಗ್ಪುರ ರಿಸರ್ವ್ ಬ್ಯಾಂಕ್‌ ಕಚೇರಿಗಳಲ್ಲಿ ಮಾತ್ರ ಮಾರ್ಚ್ 31ರವರೆಗೆ ಹಳೆ ನೋಟುಗಳ ಬದಲಾವಣೆಗೆ ಅವಕಾಶವಿದೆ. ಈ ವಿಷಯದ ಬಗ್ಗೆ ಮಾಹಿತಿ ಇರದ ಸಾರ್ವಜನಿಕರು ಎಲ್ಲಾ ರಿಸರ್ವ್‌ ಬ್ಯಾಂಕ್‌ ಕಚೇರಿಗಳಲ್ಲೂ ಹಣ ಬದಲಾವಣೆಗೆ ಅವಕಾಶ ಇದೆ ಎಂದು ತಿಳಿದು ನಗರದ ಆರ್‌ಬಿಐ ಎದುರು ಜಮಾಯಿಸಿದ್ದರು.

ನಾನು ಹಣ ಬದಲಾಯಿಸಬಹುದು ಎಂದು ಲಿಂಗರಾಜಪುರಂನಿಂದ ಇಲ್ಲಿಗೆ ಬಂದಿದ್ದೇನೆ. ಆದರೆ ಇಲ್ಲಿ ಬ್ಯಾಂಕ್ ಮುಚ್ಚಿದೆ. ಇದಕ್ಕೆ ಆರ್ ಬಿಐ ಬದಲಿ ವ್ಯವಸ್ಥೆ ಮಾಡಬೇಕು ಎಂದು ಮಹಿಳೆಯೊಬ್ಬರು ಆಗ್ರಹಿಸಿದರು.

ನಮ್ಮಲ್ಲಿರುವ ಹಣ ಬದಲಾಯಿಸಲು ನಾವು ಚೆನ್ನೈ ಅಥವಾ ಮುಂಬೈ ಗೆ ಹೋಗಲು ಸಾಧ್ಯವಿಲ್ಲ, ಸರ್ಕಾರ ಇದಕ್ಕೆ ಪೂರಕ ವ್ಯವಸ್ಥೆ ಮಾಡಬೇಕು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಎನ್ ಆರ್ ಐ ಗಳು 25 ಸಾವಿರ ರು ಬದಲಾವಣೆ ಮಾಡಿಕೊಳ್ಳಬಹುದು.

SCROLL FOR NEXT