ಹಲ್ಲೆಗೊಳಗಾಗಿರುವ ವಿವೇಕ್ ಶೆಟ್ಟಿ ಹಾಗೂ ಶಾಸಕ ರಾಜು ಕಾಗೆ
ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಸೇರಿದಂತೆ ಆರು ಆರೋಪಿಗಳಿಗೆ ಕೋರ್ಟ್ ಗುರುವಾರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಹಲ್ಲೆ ಪ್ರಕರಣ ಸಂಬಂಧ ಎಫ್ ಐಆರ್ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಶಾಸಕ ಕಾಗೆ ಹಾಗೂ ಅವರ ಕುಟುಂಬ ಸದಸ್ಯರನ್ನು ಪೊಲೀಸರು ಇಂದು ಬಂಧಿಸಿದ್ದರು. ಬಳಿಕ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 4ನೇ ಹೆಚ್ಚುವರಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಕಾಗೆ ಸೇರಿದಂತೆ ಆರು ಆರೋಪಿಗಳನ್ನು ಫೆಬ್ರವರಿ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ರಾಜು ಕಾಗೆ ಮಹಾರಾಷ್ಟ್ರದ ಭೀಮಾಶಂಕರದ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಇರುವ ಕುರಿತು ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಶಾಸಕರನ್ನು ವಶಕ್ಕೆ ಪಡೆದಿದ್ದರು. ಬಳಿಕ ಇತರೆ ಆರೋಪಿಗಳಾದ ಕಾಗೆ ಸಹೋದರ ಮತ್ತು ಪ್ರಕರಣದ ಮೊದಲ ಆರೋಪಿ ಪ್ರಸಾದ್ ಸಿದ್ದಗೌಡ ಕಾಗೆ, ಪುತ್ರಿ ತೃಪ್ತಿ ಕಾಗೆ, ಸಿದಗೌಡ ಕಾಗೆ ಪತ್ನಿ ಶೋಭಾ, ರಾಜು ಕಾಗೆ ಅವರ ಕಾರು ಚಾಲಕ ಬಾಹುಬಲಿ ಮತ್ತು ಅಶೋಕ್ ಕಾಗೆಯನ್ನು ಪೊಲೀಸರು ಬಂಧಿಸಿದ್ದರು.
ಅಂತೆಯೇ ಇದೇ ಪ್ರಕರಣದ ಇತರೆ ಏಳು ಮಂದಿ ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದು, ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಹಲ್ಲೆ ಪ್ರಕರಣ ಸಂಬಂಧ ಕಾಗವಾಡ ಠಾಣೆಯಲ್ಲಿ ಬಿಜೆಪಿ ಶಾಸಕ ರಾಜು ಕಾಗೆ ಸೇರಿ ಕುಟುಂಬದ 13 ಮಂದಿ ವಿರುದ್ಧ ಗೂಂಡಾಗಿರಿ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣದ ಇನ್ನೂ ಏಳು ಮಂದಿ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಪ್ರಕರಣದಲ್ಲಿ ಶಾಸಕ ರಾಜು ಕಾಗೆ 12ನೇ ಆರೋಪಿಯಾಗಿದ್ದು, ಶಾಸಕರ ಸಹೋದರ ಪ್ರಸಾದ್ ಸಿದಗೌಡ ಕಾಗೆ ಎ1, ಗಜಾನನ ಸದಾಶಿವ ಕಾಗೆ ಎ2, ಗಜಾನನ ಮಹಾದೇವ ಎ3, ಶೇಖರ ತಮ್ಮಾಣಿ ಎ4, ವಿನೋದ ಪಾಟೀಲ ಎ5, ಅಶೋಕ ಪಾಟೀಲ ಎ7, ಬಾಹುಬಲಿ ಎ8, ಅಶೋಕ ತಮ್ಮಣಿ ಕಾಗೆ ಎ8, ಸಿದಗೌಡ ಆಲಗೌಡ ಕಾಗೆ ಎ9, ತೃಪ್ತಿ ಕಾಗೆ ಎ10, ಶೋಭಾ ಸಿದಗೌಡ ಕಾಗೆ ಎ11, ರಾಜುಕಾಗೆ ಎ12, ಡಾ ಪ್ರಸನ್ನ ಕಾಗೆ ಎ13 ಆರೋಪಿಗಳಾಗಿದ್ದಾರೆ. ಇವರೆಲ್ಲರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 342, 452, 307, 302, 323, 324, 326, 354 ಹಾಗೂ 367, 504, 506,149 ಸೆಕ್ಷನ್ ಅಡಿ ಎಫ್‍ಐಆರ್ ದಾಖಲಾಗಿದೆ.
ಫೇಸ್ ಬುಕ್'ನಲ್ಲಿ ಕಾಂಗ್ರೆಸ್ ನಾಯಕ ವಿವೇಕ್ ಶೆಟ್ಟಿ ಬಿಜೆಪಿ ವಿರುದ್ಧ ಅವಹೇಳನಕಾರಿ ಸ್ಟೇಟಸ್ ಹಾಕಿದ್ದರು ಎಂದು ಆರೋಪಿಸಿ ರಾಜು ಕಾಗೆ ಸಹೋದರ ಪ್ರಸಾದ್ ಸಿದ್ದಗೌಡಕಾಗೆ ಹಾಗೂ 12 ಜನ ಅಥಣಿ ತಾಲೂಕಿನ ಉಗಾರ ಗ್ರಾಮದ ವಿವೇಕ್ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಜನವರಿ 1ರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆಯ ಮೆಟ್ಟಿಲುಗಳ ಮೇಲೆ ಧರಧರನೆ ಎಳೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿವೇಕ್ ಶೆಟ್ಟಿ ದೂರಿನ ಮೇರೆಗೆ ರಾಜುಕಾಗೆ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ಗೂಂಡಾಗಿರಿ ಕೇಸ್ ದಾಖಲಿಸಿಕೊಂಡಿದ್ದರು.