ರಾಜ್ಯ

ಬೆಂಗಳೂರು ವ್ಯಕ್ತಿಯ ನಿಗೂಢ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

Shilpa D

ಚಿತ್ರದುರ್ಗ/ ಹಿರಿಯೂರು: ನವೆಂಬರ್ 8 ರಂದು ನಡೆದಿದ್ದ ಬೆಂಗಳೂರಿನ ವ್ಯಕ್ತಿಯ ಕೊಲೆ ಪ್ರಕರಣವನ್ನು ಚಿತ್ರದುರ್ಗ ಪೊಲೀಸರು ಬೇಧಿಸಿ ಇಬ್ಬರನ್ನು ಬಂಧಿಸಿದ್ದಾರೆ.

ನವೆಂಬರ್ 8 ರಂದು ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಬಸವರಾಜ್ ಎಂಬುವರು ಕೊಲೆಯಾಗಿದ್ದರು, ಈ ಪ್ರಕರಣ ಸಂಬಂಧ ಶ್ರೀನಿವಾಸ್ ಮತ್ತು ಜಯರಾಮ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಹಿರಿಯೂರು ತಾಲೂಕಿನ ಶ್ರೀನಿವಾಸ್ ಬಸವರಾಜ್ ಅವರ ಹತ್ತಿರದ ಸಂಬಂಧಿಯಾಗಿದ್ದರು. ಬಸವರಾಜ್ ಶ್ರೀನಿವಾಸ್ ಗೆ 50 ಲಕ್ಷ ರು ಹಣ ಸಾಲವಾಗಿ ನೀಡಿದ್ದರು. ಎಷ್ಟು ದಿನಗಳಾದರೂ ಶ್ರೀನಿವಾಸ್ ಹಣ ವಾಪಸ್ ನೀಡಿರಲಿಲ್ಲ, ಹಣ ನೀಡುವಂತೆ ಬಸವರಾಜ್ ಶ್ರೀನಿವಾಸ್ ಗೆ ಒತ್ತಡ ಹಾಕುತ್ತಿದ್ದರು. ಇದರಿಂದ ಕೋಪಗೊಂಡ ಶ್ರೀನಿವಾಸ್ ಬಸವರಾಜ್ ಗೆ ಕರೆ ಮಾಡಿ ಹಿರಿಯೂರಿಗೆ ಬಂದು ಹಣ ತೆಗೆದುಕೊಂಡು ಹೋಗಿದ್ದಾರೆ. ಅದರಂತೆ ಹಣ ಪಡೆಯಲು ಬಸವರಾಜ್ ನವೆಂಬರ್ 8ರಂದು ಹಿರಿಯೂರಿಗೆ ತೆರಳಿದ್ದಾರೆ.

ಈ ವೇಳೆ ಕಟ್ಟಡದ ಬಳಿ ಬಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ.  ಶ್ರೀನಿವಾಸ್ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು  ಬಸವರಾಜ್ ನನ್ನು ಕೊಲೆ ಮಾಡಿದ್ದಾನೆ. ನಂತರ ಈ ವಿಷಯವನ್ನು ತನ್ನ ಬಾಮೈದುನ ಜಯರಾಮ್ ಗೆ ತಿಳಿಸಿದ್ದಾನೆ, ಇಬ್ಬರು ಸೇರಿ ಹಿರಿಯೂರಿನ ಜಯಲಕ್ಷ್ಮಿ ಥಿಯೇಟರ್ ಬಳಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಕಂಪೌಂಡ್ ಗೋಡೆ ಒಳಗೆ ಹಾಕಿ ಶವವನ್ನು ಸಮಾಧಿ ಮಾಡಿದ್ದಾರೆ.

ತನ್ನ ತಂದೆ ವಾಪಸ್ ಬಾರದ ಹಿನ್ನೆಲೆಯಲ್ಲಿ  ಬಸವರಾಜ್ ಪುತ್ರ ಪ್ರಶಾಂತ್ ಶ್ರೀನಿವಾಸ್ ಗೆ ಕರೆ ಮಾಡಿ ವಿಚಾರಿಸಿದ್ದಾನೆ, ಆದರೆ ಶ್ರೀನಿವಾಸ್ ಸರಿಯಾದ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ದಾಖಲಿಸಿದ್ದ. ಜೊತೆಗೆ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅನುಮಾನಗೊಂಡ ಪೊಲೀಸರು ಶ್ರೀನಿವಾಸ್ ನನ್ನು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

SCROLL FOR NEXT