ರಾಜ್ಯ

ಪೊಲೀಸರಿಗೆ ಧಮ್ಕಿ: ಮಾಗಡಿ ಶಾಸಕ ಎಚ್. ಸಿ ಬಾಲಕೃಷ್ಣ ಹಾಗೂ ಬೆಂಬಲಿಗರಿಗೆ ಜಾಮೀನು

Shilpa D

ಬೆಂಗಳೂರು; ಪೊಲೀಸರಿಗೆ ಬೆದರಿಕೆ ಹಾಗೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದ ಮಾಗಡಿ ಶಾಸಕ ಎಚ್. ಸಿ ಬಾಲಕೃಷ್ಣ ಅವರಿಗೆ ಮಾಗಡಿ 1ನೇ ಜೆಎಂಎಫ್ ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಪೊಲೀಸ್‌ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಹಾಗೂ ಬೆದರಿಕೆ ಹಾಕಿದ ಆರೋಪಕ್ಕೆ ಗುರಿಯಾಗಿರುವ ಬಾಲಕೃಷ್ಣ ನ್ಯಾಯಾಲಯಕ್ಕೆ ಶರಣಾದರು. ಮಧ್ಯಾಹ್ನ ಆರೋಪಿಗಳ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ಕೆ.ಎಂ. ಆನಂದ್‌ ಅವರು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

5 ದಿನಕ್ಕೆ ಒಮ್ಮೆ ಠಾಣೆಗೆ ಹಾಜರಾಗಬೇಕು. ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಬಾರದು ಹಾಗೂ ತಲಾ 50 ಸಾವಿರ ಭದ್ರತೆ ಹಾಗೂ ಒಬ್ಬರ ಜಾಮೀನು ನೀಡಬೇಕು ಎಂಬ ಷರತ್ತಿನೊಂದಿಗೆ ಜಾಮೀನು ನೀಡಲಾಗಿದೆ.

ಮಾಗಡಿ ತಾಲ್ಲೂಕಿನ ಅಯ್ಯಂಡಹಳ್ಳಿಯಲ್ಲಿ  ನಡೆದಿದ್ದ ಘರ್ಷಣೆ ಪ್ರಕರಣ ಬಳಿಕ ಪೊಲೀಸರು ತಮ್ಮ ಬೆಂಬಲಿಗರ ದೂರು ದಾಖಲಿಸಿಕೊಳ್ಳಲಿಲ್ಲ. ಒಂದು ಗುಂಪು ಮತ್ತು ಪಕ್ಷಕ್ಕೆ ಸಂಬಂಧಿಸಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಶಾಸಕ ಬಾಲಕೃಷ್ಣ ತಮ್ಮ ಬೆಂಬಲಿಗರೊಂದಿಗೆ ಬುಧವಾರ ಕುದೂರು ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.ಠಾಣೆಯ ಒಳಗೆ ಮಾತುಕತೆ ವೇಳೆ ಸಿಪಿಐ ನಂದೀಶ್‌ ವಿರುದ್ಧ ವಾಗ್ವಾದ ನಡೆಸಿದ್ದರು. ಈ ಸಂದರ್ಭ ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸಿ, ಬೆದರಿಕೆಯನ್ನೂ ಒಡ್ಡಿದ್ದರು. ಹೀಗಾಗಿ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.

SCROLL FOR NEXT