ರಾಜ್ಯ

ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಧಿಸಿದ ಇವರು ಈಗ ಬೆಂಗಳೂರು ವಿವಿ ಟಾಪರ್ಸ್ !

Srinivas Rao BV
ಬೆಂಗಳೂರು: ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಸಾಲಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ನಾಗಮಲ್ಲೇಶ್ವರಿ ಹಾಗೂ ವೆಂಕಟೇಶ್ ಸೇರ್ಪಡೆಯಾಗಿದ್ದಾರೆ. 
ಬೆಂಗಳೂರು ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚಿನ್ನದ ಪದಕ ವಿಜೇತರ ಪಟ್ಟಿಯಲ್ಲಿ ನಾಗಮಲ್ಲೇಶ್ವರಿ ಹಾಗೂ ವೆಂಕಟೇಶ್ ಸಹ ಇದ್ದರು. ಆಂಧ್ರಪ್ರದೇಶದ ಮೂಲದವರಾದ ನಾಗಮಲ್ಲೇಶ್ವರಿ ಪೊಲೀಯೋ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಈ ಸಮಸ್ಯೆಯನ್ನೂ ಮೀರಿ ಅವರು ಎಂಎ ತೆಲುಗು ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದು, ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. 
"ವಿಕಲಚೇತನ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನದಿಂದ ಓದಿದೆ. ಪ್ರತಿ ತಿಂಗಳು 1,500 ರೂಪಾಯಿಯಷ್ಟು ವಿದ್ಯಾರ್ಥಿ ವೇತನ ಪಡೆಯುತ್ತಿದ್ದೆ. ನನ್ನ ಪೋಷಕರು ಕೃಷಿಕರಾಗಿದ್ದರಿಂದ ವಿದ್ಯಾರ್ಥಿ ವೇತನದ ಮೇಲೆಯೇ ಸಂಪೂರ್ಣವಾಗಿ ಅವಲಂಬನೆಯಾಗಬೇಕಾಯಿತು ಎಂದಿರುವ ನಾಗಮಲ್ಲೇಶ್ವರಿ,  ಪಿಹೆಚ್ ಡಿ ನಂತರ ಪ್ರಾಧ್ಯಾಪಕರಾಗಬೇಕೆಂದಿದ್ದಾರೆ. 
ಇನ್ನು ಚಿನ್ನದ ಪದಕ ಗೆದ್ದಿರುವ ಮತ್ತೋರ್ವ ವಿದ್ಯಾರ್ಥಿ ವೆಂಕಟೇಶ್ ದೃಷ್ಟಿ ದೋಷ ಹೊಂದಿದ್ದು, ಬಿಎ (ಸಂಗೀತ) ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇಂದಿರಾನಗರದಿಂದ ಎನ್ ಆರ್ ಕಾಲೋನಿಗೆ ಸಾರ್ವಜನಿಕ ಸಾರಿಗೆಯಲ್ಲೇ ವೆಂಕಟೇಶ್ ಸಂಚರಿಸುತ್ತಿದ್ದರು. ವಿದ್ಯಾಭ್ಯಾಸ ಮುಂದುವರೆಸಲು ಕೋಲಾರದಿಂದ ನನ್ನ ಅಣ್ಣನೊಂದಿಗೆ ಬೆಂಗಳೂರಿಗೆ ಬಂದಿದ್ದೇನೆ, ಚಿನ್ನದ ಪದಕ ಗೆದ್ದಿರುವ ಬಗ್ಗೆ ಹೆಮ್ಮೆ ಇದೆ ಎಂದು ವೆಂಕಟೇಶ್ ತಿಳಿಸಿದ್ದಾರೆ. 
ಎಂಎ ಎಕಾನಾಮಿಕ್ಸ್ ವಿಭಾಗಕ್ಕೆ ಸೇರ್ಪಡೆಯಾಗಿರುವ ವೆಂಕಟೇಶ್ ವಕೀಲರಾಗಬೇಕೆಂದಿದ್ದಾರೆ. ಆದರೆ ವಿಕಲಚೇತನ ವಿದ್ಯಾರ್ಥಿಗಳ ಕೋಟಾದಡಿಯಲ್ಲಿ ಹಾಸ್ಟೆಲ್ ಸೌಲಭ್ಯ ಒದಗಿಸಲು ವಿವಿಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
SCROLL FOR NEXT