ರಾಜ್ಯ

ಮಣ್ಣಲ್ಲಿ ಮಣ್ಣಾದ ಹಾಸನದ ಯೋಧ ಸಂದೀಪ್!

Srinivasamurthy VN

ಹಾಸನ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್‌ ಸೇನಾ ಶಿಬಿರದ ಮೇಲೆ ಕಳೆದ ಬುಧವಾರ ಸಂಭವಿಸಿದ ಭಾರೀ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾಗಿದ್ದ ಕರ್ನಾಟಕದ ಯೋಧ ಸಂದೀಪ್‌ ಶೆಟ್ಟಿ ಅವರ  ಅಂತ್ಯಕ್ರಿಯೆಯನ್ನು ಬುಧವಾರ ನಡೆಸಲಾಯಿತು.

ಸಂದೀಪ್ ಶೆಟ್ಟಿ ಅವರ ಹುಟ್ಟೂರಾದ ದೇವಿಹಳ್ಳಿಯ ಮನೆ ಬಳಿ ಇರುವ ಜಮೀನಿನಲ್ಲಿ ದೇವಾಂಗ ಸಂಪ್ರದಾಯದಂತೆ ಸಂದೀಪ್ ಶೆಟ್ಟಿ ಅವರ ಪಾರ್ಥೀವ ಶರೀರವನ್ನು ಮಣ್ಣು ಮಾಡಲಾಯಿತು. ದೇವಾಂಗ ಮಠದ ಶ್ರೀಗಳಾದ  ದಯಾನಂದಪುರಿ ಸ್ವಾಮೀಜಿ ,ಹಾಸನದ ಜಿಲ್ಲಾಧಿಕಾರಿ ವಿ. ಚೈತ್ರಾ, ಎಸಿ ನಾಗರಾಜು ,ಪೊಲೀಸ್‌ ಅಧಿಕಾರಿಗಳು ಸೇರಿ ರಾಜಕೀಯ ಮುಖಂಡರು ಸಾವಿರಾರು ಗ್ರಾಮಸ್ಥರು ಅಂತ್ಯಕ್ರಿಯೆ ವೇಳೆ ಹಾಜರಿದ್ದು  ವೀರ ಯೋಧನಿಗೆ  ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು.

ಇದಕ್ಕೂ ಮೊದಲು ನಡೆದ ಅಂತ್ಯಕ್ರಿಯಾ ವಿಧಿ ವೇಳೆ ಸೇನಾಪಡೆಯ ಯೋಧರು ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು.

ದೇವಿಹಳ್ಳಿಯ ಪುಟ್ಟರಾಜು ಮತ್ತು ಗಂಗಮ್ಮ ದಂಪತಿಯ ಕಿರಿಯ ಪುತ್ರನಾಗಿದ್ದ ಸಂದೀಪ್‌ ಶೆಟ್ಟಿ ಹಾಸನದ ಎಂ.ಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ  ದ್ವಿತೀಯ ಪಿಯುವರೆಗೆ ಓದಿದ್ದರು. ಅಲ್ಲದೆ ಶಿಕ್ಷಕರಾಗುವ ಕನಸು ಕಂಡಿದ್ದರು. ಬಳಿಕ  ಸೇನೆ ಸೇರಲು ನಿಶ್ಚಯಿಸಿ 2010ರಲ್ಲಿ ಸೇನೆ ಸೇರಿದ್ದರು. ಮೊದಲು ಗುಜರಾತ್‌ ಸೇನಾ ವಲಯದಲ್ಲಿ  ಸೇವೆ ಸಲ್ಲಿಸಿದ್ದ ಸಂದೀಪ್‌ ಅವರು, ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾವಣೆಯಾಗಿದ್ದರು.

SCROLL FOR NEXT