ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಗೊಳಿಸಲು ನಗರದಲ್ಲಿ ಸಬರ್ಬನ್ ರೈಲು ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಭಾನುವಾರ ಪುನರುಚ್ಚರಿಸಿದ್ದಾರೆ.
ಇಂದು ನಗರದ ರೈಲು ನಿಲ್ದಾಣದಲ್ಲಿ ಬೆಂಗಳೂರು, ಹುಬ್ಬಳ್ಳಿ, ತೋರಣಗಲ್‌ನಲ್ಲಿ ರೈಲ್ವೆ ಇಲಾಖೆಯಿಂದ ಪೂರ್ಣಗೊಳಿಸಿದ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಬರ್ಬನ್ ರೈಲು ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು. ಅಲ್ಲದೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಯೋಜನೆ ಸಂಬಂಧ ಚರ್ಚೆ ನಡೆಸಿ ಇರುವ ಅಡೆತಡೆಗಳು ಹಾಗೂ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಶೀಘ್ರವೆ ಸಬರ್ಬನ್ ರೈಲು ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಯೋಜನೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಹಲವು ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕೆ ಸರ್ಕಾರದಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಹೇಳಿದ ಅವರು, 2014-15ರಲ್ಲಿ 783 ಕೋಟಿ, 2015-16ರಲ್ಲಿ 1781 ಕೋಟಿ, 2016-17ರಲ್ಲಿ 2567 ಕೋಟಿ, 2017-18ರಲ್ಲಿ 3174 ಕೋಟಿ ರೂ. ಮೊತ್ತದ ಯೋಜನೆಗಳನ್ನು ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ವೇಳೆ ಮಾತನಾಡಿದ ಕೇಂದ್ರ ಸಾಂಖಿಕ ಮತ್ತು ಕಾರ್ಯಕ್ರಮ ಜಾರಿ ಸಚಿವ ಡಿ.ವಿ ಸದಾನಂದಗೌಡ ಅವರು, ಸಬರ್ಬನ್ ರೈಲ್ವೆ ಯೋಜನೆ ಬೆಂಗಳೂರಿಗೆ ಅತ್ಯಂತ ಅಗತ್ಯವಾಗಿದ್ದು, ಶೇ. 80ರಷ್ಟು ರಾಜ್ಯಸರ್ಕಾರ, ಶೇ. 20ರಷ್ಟು ಕೇಂದ್ರ ಸರ್ಕಾರ ಹಣ ನೀಡಲು ಮುಂದಾಗಿರುವುದರಿಂದ ರಾಜ್ಯಸರ್ಕಾರಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಪುನರ್ ಪರಿಶೀಲಿಸಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲು ರೈಲ್ವೆ ಇಲಾಖೆ ಮುಂದಾಗಬೇಕು ಎಂದು ಸುರೇಶ್ ಪ್ರಭು ಅವರಿಗೆ ಮನವಿ ಮಾಡಿದರು.
ಭೂಸ್ವಾಧೀನಕ್ಕೆ ರಾಜ್ಯಸರ್ಕಾರವೇ ಹೆಚ್ಚಿನ ಅನುದಾನ ನೀಡುವುದರಿಂದ ಹೊರೆಯಾಗಲಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಅದರ ಹೊರೆಯನ್ನು ಹೊರಬೇಕು ಎಂದು ಹೇಳಿದರು.