ರಾಜ್ಯ

ಪ್ರತಿಭಟನೆಯ ಒತ್ತಡ: ನಮ್ಮ ಮೆಟ್ರೋ ಸೂಚನಾ ಫಲಕಗಳಲ್ಲಿ ಹಿಂದಿ ತೆಗೆದುಹಾಕಿದ ಬಿಎಂಆರ್ ಸಿಎಲ್

Srinivas Rao BV
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿರುವ ಸೂಚನಾ ಫಲಕಗಳಲ್ಲಿ ಹಿಂದಿ ಭಾಷೆಯನ್ನು ಹಾಕುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಗೆ ಮಣಿದಿರುವ ಬಿಎಂಆರ್ ಸಿಎಲ್ ಸೂಚನಾ ಫಲಕಗಳಲ್ಲಿ ಹಿಂದಿಯನ್ನು ತೆಗೆದುಹಾಕುವ ಕೆಲಸಕ್ಕೆ ಚಾಲನೆ ನೀಡಿದೆ. 
ಜು.2 ರಂದು ಸಂಜೆಯಿಂದ ಮೆಟ್ರೋ ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಹಿಂದಿ ಭಾಷೆಯನ್ನು ತೆಗೆಯುವ ಕೆಲಸ ಪ್ರಾರಂಭವಾಗಿದೆ, ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕೆ ಎರಡು ಪ್ರವೇಶ ದ್ವಾರಗಳಿದ್ದು, ಈ ಪೈಕಿ ಒಂದರಲ್ಲಿರುವ ಮೆಟೋ ನಿಲ್ದಾಣದ ಹೊರ ಭಾಗದಲ್ಲಿದ್ದ ಹಿಂದಿ ಸೂಚನಾ ಫಲಕವನ್ನು ತೆಗೆದುಹಾಕಲಾಗಿದೆ. 
ಸ್ಟಿಕರ್ ಗಳಲ್ಲಿ ಹಾಕಲಾಗಿದ್ದ ಹಿಂದಿ ಭಾಷಯ ಎಲ್ಲಾ ಪದಗಳನ್ನು ತೆಗೆದುಹಾಕಲಾಗಿದೆ. ಆದರೆ ಇನ್ನೂ ಕೆಲವು ಸೂಚನಾ ಫಲಕಗಳಲ್ಲಿ ಹಿಂದಿ ಪದಗಳನ್ನು ಮೆಟಲ್ ನಲ್ಲಿ ಹಾಕಲಾಗಿದ್ದು, ಅದನ್ನು ಕಾಣದಂತೆ ಮುಚ್ಚಲಾಗಿದೆ. ಲೋಹದಲ್ಲಿ ಬರೆಯಲಾಗಿದ್ದ ಹಿಂದಿ ಪದಗಳು ಕಾಣದಂತೆ ಟೇಪ್ ಬಳಕೆ ಮಾಡಿ ಮುಚ್ಚಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. 
ಹಿಂದಿ ಭಾಷೆಯ ಪದಗಳನ್ನು ತೆಗೆಯದೇ ಇದ್ದಿದ್ದರೆ ಕನ್ನಡ ಪರ ಹೋರಾಟಗಾರರು ಸೂಚನಾ ಫಲಕದ ಮೇಲಿರುವ ಹಿಂದಿ ಪದಗಳಿಗೆ ಕಪ್ಪು ಮಸಿ ಬಳಿಯಲು ಸಿದ್ಧತೆ ನಡೆಸಿದ್ದರು, ಮುನ್ನೆಚ್ಚರಿಕಾ ಕ್ರಮವಾಗಿ ಬಿಎಂಆರ್ ಸಿಎಲ್ ಹಿಂದಿ ಪದಗಳನ್ನು ತೆಗೆಯುವ ಕೆಲಸಕ್ಕೆ ಚಾಲನೆ ನೀಡಿದೆ.
SCROLL FOR NEXT