ನವದೆಹಲಿ: ಸಾವರ್ಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಯನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕರ್ನಾಟಕದ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಅವರಿಗೆ ಸೋಮವಾರ ಸುಪ್ರೀಂ ಕೋರ್ಟ್ 25 ಲಕ್ಷ ರುಪಾಯಿ ದಂಡ ವಿಧಿಸಿದೆ.
ಗುಲ್ಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಉದ್ದೇಶಿತ ಮಿನಿ ವಿಧಾಸೌಧ ಸ್ಥಳಾಂತರ ವಿರೋಧಿಸಿ ಟಿಜೆ ಅಬ್ರಾಹಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ಎ ಎಂ ಖನ್ವಿಲ್ಕರ್ ಅವರು, ಮಿನಿ ವಿಧಾನ ಸೌಧ ಸ್ಥಳಾಂತರ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಲ್ಲ ಎಂದು ಅರ್ಜಿದಾರರಿಗೆ 25 ಲಕ್ಷ ರುಪಾಯಿ ದಂಡ ವಿಧಿಸಿದ್ದಾರೆ.
ಟಿಜೆ ಅಬ್ರಾಹಂ ಪರ ವಾದ ಮಂಡಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಅವರು, ಸರ್ಕಾರ ಉದ್ದೇಶಿತ ಮಿನಿ ವಿಧಾನಸೌಧ ಸ್ಥಳಾಂತರಿಸುವ ನಿರ್ಧಾರದಿಂದಾಗಿ ಕೃಷಿ ಬೀಜ ಬಿತ್ತನೆ ಮೇಲೆ ಪರಿಣಾಮ ಬೀರಲಿದೆ ಮತ್ತು ದುಂದುವೆಚ್ಚಕ್ಕೆ ಕಾರಣವಾಗಲಿದೆ ಎಂದರು. ವಕೀಲರ ವಾದವನ್ನು ತಳ್ಳಿಹಾಕಿದ ಕೋರ್ಟ್, ಅರ್ಜಿದಾರನಿಗೆ 25 ಲಕ್ಷ ರುಪಾಯಿ ದಂಡ ವಿಧಿಸಿ ಅದನ್ನು ಎರಡು ವಾರಗಳಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಪಾವತಿಸುವಂತೆ ನಿರ್ದೇಶನ ನೀಡಿದೆ.
ಇನ್ನು ಸರ್ಕಾರದ ಪರ ವಾದ ಮಂಡಿಸಿದ ರಾಜ್ಯದ ಅಡ್ವೋಕೇಟ್ ಜನರಲ್ ಎಂಆರ್ ನಾಯಕ್ ಅವರು, ಮಿನಿ ವಿಧಾನಸೌಧ ಸ್ಥಳಾಂತರಕ್ಕೂ, ಇವರಿಗೂ ಯಾವುದೇ ಸಂಬಂಧವಿಲ್ಲ. ಅನಗತ್ಯವಾಗಿ ಪಿಐಎಲ್ ಸಲ್ಲಿಸಿ ಕೋರ್ಟ್ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಮುಂಚೆ ಉದ್ದೇಶಿತ ಮಿನಿ ವಿಧಾನಸೌಧ ಸ್ಥಳಾಂತರ ವಿರೋಧಿಸಿ ಟಿಜೆ ಅಬ್ರಾಹಂ ಅವರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು. ಆದರೆ ಅವರ ಪಿಐಎಲ್ ವಜಾಗೊಳಿಸಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.