ಬೆಂಗಳೂರು: ರಾಜ್ಯದ ಎಲ್ಲಾ ಕುಟುಂಬಗಳಿಗೂ ಯೂನಿವರ್ಸಲ್ ಹೆಲ್ತ್ ಕಾರ್ಡ್ ವಿತರಣೆ ಮಾಡುವ ಹೊಸ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲಾ ಕುಟುಂಬಗಳಿಗೂ ಯೂನಿವರ್ಸಲ್ ಹೆಲ್ತ್ ಕಾರ್ಡ್ ನೀಡುವ ಪ್ರಸ್ತಾವನೆಯನ್ನು ಶೀಘ್ರವೇ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅಂಗೀಕರಿಸಲಾಗುತ್ತದೆ. ಹೆಲ್ತ್ ಕಾರ್ಡ್ ಅಡಿಯಲ್ಲಿ ಕಡಿಮೆ ದರ/ಉಚಿತವಾಗಿ ಆರೋಗ್ಯ ಸೇವೆಯನ್ನು ಪಡೆಯಬೇಕಿರುವವರಿಗೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಗಳ ಅಗತ್ಯವಿರುವುದಿಲ್ಲ, ಬದಲಾಗಿ ಹೆಲ್ತ್ ಕಾರ್ಡ್ ನೊಂದಿಗೆ ಆಧಾರ್ ನಂಬರ್ ನ್ನು ಲಿಂಕ್ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಯೂನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆಗೆ ಒಮ್ಮೆ ಅನುಮೋದನೆ ದೊರೆತರೆ, ರಾಜೀವ್ ಆರೋಗ್ಯ ಭಾಗ್ಯ, ಯಶಸ್ವಿನಿ ಹಾಗೂ ಇನ್ನಿತರ ಯೋಜನೆಗಳ ಲಾಭವನ್ನು ಕಾರ್ಡ್ ಮೂಲಕವೇ ಪಡೆದುಕೊಳ್ಳಬಹುದು ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
1.30 ಕೋಟಿ ಕುಟುಂಬಗಳು ಯೂನಿವರ್ಸಲ್ ಹೆಲ್ತ್ ಕಾರ್ಡ್ ನ ಫಲಾನುಭವಿಗಳಾಗಲಿದ್ದಾರೆ. ವಿವಿಧ ಆರೋಗ್ಯ ಯೋಜನೆಗಳಿಗೆ ರಾಜ್ಯ ಸರ್ಕಾರ 1,022 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ, ಈ ಹಣವನ್ನು ಹೊಸ ಯೋಜನೆಗೆ ವರ್ಗಾವಣೆ ಮಾಡಲಾಗುವುದು ಎಂದು ಸಚಿವ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.