ಬೆಂಗಳೂರು: ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರದಂಡನೆಗೆ ಗುರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಮೂವರು ಆರೋಪಿಗಳು ನಿರಪರಾಧಿಗಳು ಎಂದು ಹೈಕೋರ್ಟ್ ಬುಧವಾರ ಬಿಡುಗಡೆ ಮಾಡಿದೆ,
ಹುಬ್ಬಳ್ಳಿಯಲ್ಲಿ 2000ನೇ ಇಸವಿಯಲ್ಲಿ ನಡೆದಿದ್ದ ವ್ಯಾಪಾರಿ ಮಲ್ಲಿಕಾರ್ಜುನ ಢೇಕಣಿ (83 ವರ್ಷ) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ತಂಡದ ಮೂವರು ಆರೋಪಿಗಳನ್ನು ಹೈಕೋರ್ಟ್ ಬುಧವಾರ ಖುಲಾಸೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಚನ್ನಸಂದ್ರದ ವೆಂಕಟೇಶ್, ಮುನಿಕೃಷ್ಣ ಹಾಗೂ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಬಾಳೆಕಟ್ಟೆ ಗ್ರಾಮದ ನಲ್ಲತಿಮ್ಮ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯಪೀಠ ಪ್ರಾಸಿಕ್ಯೂಷನ್ ವೈಫಲ್ಯದ ಹಿನ್ನಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದೆ.
"ಆರೋಪಿಗಳ ವಿರುದ್ಧ ಸಮರ್ಥ ಸಾಕ್ಷ್ಯ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ ಸಂಗ್ರಹಿಸಲಾದ ಬೆರಳಚ್ಚು ಹಾಗೂ ಆರೋಪಿಗಳ ಬೆರಳಚ್ಚು ನಡುವೆ ಸಾಮ್ಯತೆ ಇಲ್ಲ. ಆರೋಪಿಗಳು ನಡೆಸಿದ ಹಲ್ಲೆಯಿಂದಲೇ ಮಲ್ಲಿಕಾರ್ಜುನ ಮೃತಪಟ್ಟಿದ್ದಾರೆ ಎಂಬುದಕ್ಕೆ ಸೂಕ್ತ ವೈದ್ಯಕೀಯ ವರದಿಯೂ ಇಲ್ಲ. ಆರೋಪಿಗಳು ಬಳಸಿದ ಆಯುಧಗಳ ಸಾಕ್ಷ್ಯವೂ ನಂಬಲು ಅರ್ಹವಾಗಿಲ್ಲ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೇವಲ 400 ರು.ಗಾಗಿ ನಡೆದಿತ್ತು ಭೀಕರ ಹತ್ಯೆ
ಹುಬ್ಬಳ್ಳಿಯ ಕಾಯಿನ್ ರಸ್ತೆಯಲ್ಲಿ 2000ನೇ ಇಸ್ವಿ ಫೆಬ್ರುವರಿ 19ರಂದು ರಾತ್ರಿ ಆರೋಪಿಗಳು ಮಲ್ಲಿಕಾರ್ಜುನ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ರು.400 ಕಸಿದುಕೊಂಡಿದ್ದರು. ಕಬ್ಬಿಣದ ಸಲಾಕೆಯಿಂದ ಥಳಿಸಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಮಲ್ಲಿಕಾರ್ಜುನ ಅವರು 2000 ಮೇ 12ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರೋಪಿಗಳ ವಿರುದ್ಧ ಬೆಂಗಳೂರು ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ, 2010ರ ಜೂನ್ 30ರಂದು ಆದೇಶ ಪ್ರಕಟಿಸಿ, ಆರೋಪಿ ಲಕ್ಷ್ಮೀಯನ್ನು ಬಿಡುಗಡೆ ಮಾಡಿತ್ತು. ಉಳಿದ ಮೂವರಿಗೆ ಮರಣದಂಡನೆ ಹಾಗೂ ತಲಾ 6 ಸಾವಿರ ರು. ದಂಡ ವಿಧಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆರೋಪಿಗಳ ಪರ ಹಸ್ಮತ್ ಪಾಷಾ ಎಂಬುವವರು ಮತ್ತು ಪ್ರಾಸಿಕ್ಯೂಷನ್ ಪರ ಎಚ್.ಎನ್.ನೀಲೋಗಲ್ ವಾದ ಮಂಡಿಸಿದ್ದರು. ಆರೋಪಿಗಳ ವಿರುದ್ಧದ ಇನ್ನೂ ಹಲವು ಪ್ರಕರಣ ವಿಚಾರಣೆ ಹಂತದಲ್ಲಿವೆ.