ಬೆಂಗಳೂರು: ಮಾನ್ಯತೆ ಇಲ್ಲದ ಕೋರ್ಸ್ ಗಳನ್ನು ಸೇರ್ಪಡೆ ಮಾಡುವ ಮೂಲಕ ವಿದ್ಯಾರ್ಥಿಗಳ ಸೆಳೆಯುವ ಪ್ರಯತ್ನ ಮಾಡುತ್ತಿರುವ ಕಾಲೇಜುಗಳಿಗೆ ಬೆಂಗಳೂರು ವಿಶ್ವ ವಿದ್ಯಾಲಯ ಬಿಸಿ ಮುಟ್ಟಿಸಿದ್ದು, ಮಾನ್ಯತೆ ಇಲ್ಲದ ಕೋರ್ಸ್ ಗಳ ಸೇರ್ಪಡೆ ಬೇಡ ಎಂದು ಎಚ್ಚರಿಕೆ ನೀಡಿದೆ.
ಮೂಲಗಳ ಪ್ರಕಾರ ಬೆಂಗಳೂರು ವಿಶ್ವ ವಿದ್ಯಾಲಯದ ಅನುದಾನಿತ ಖಾಸಗಿ ಕಾಲೇಜುಗಳಲ್ಲಿ ಮಾನ್ಯತೆ ಇಲ್ಲದ ಕೋರ್ಸ್ ಗಳನ್ನು ಸೇರ್ಪಡೆ ಮಾಡಿಕೊಂಡು ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಕೆಲಸ ನಡೆಯುತ್ತಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಇತರೆ ಜಾಹಿರಾತು ಪ್ರದೇಶಗಳಲ್ಲಿ ಮಾನ್ಯತೆ ಇಲ್ಲದ ಕೋರ್ಸ್ ಗಳನ್ನು ಜಾಹಿರಾತು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆಯುತ್ತಿರುವ ವಿಚಾರ ವಿವಿ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಬೆಂಗಳೂರು ವಿವಿ ರಿಜಿಸ್ಟ್ರಾರ್ (ಆಡಳಿತ ವಿಭಾಗ) ಪ್ರೊ.ಬಿಕೆ ರವಿ ಅವರು ಅನುದಾನಿತ ಕಾಲೇಜುಗಳಿಗೆ ಎಚ್ಚರಿಕೆ ನೀಡಿದ್ದು, ಮಾನ್ಯತೆ ಇಲ್ಲದ ಕೋರ್ಸ್ ಗಳ ಸೇರ್ಪಡೆ ಬೇಡ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಕೆಲ ಖಾಸಗಿ ಕಾಲೇಜುಗಳು ಮಾನ್ಯತೆ ಇಲ್ಲದ ಕೋರ್ಸ್ ಗಳ ಕುರಿತು ಜಾಹಿರಾತು ನೀಡುವ ಮೂಲಕ ವಿದ್ಯಾರ್ಥಿಗಳನ್ನು ತಪ್ಪುದಾರಿಗೆಳೆಯುತ್ತಿವೆ. ಕೆಲ ಕಾಲೇಜುಗಳಿಂದ ತಪ್ಪು ಮಾಹಿತಿ ಪ್ರಸಾರವಾಗುತ್ತಿದ್ದು, ಹೆಚ್ಚೆಚ್ಚು ಅಡ್ಮಿಶನ್ ಹೊಂದುವ ಸಲುವಾಗಿ ಸುಳ್ಳು ಮಾಹಿತಿಗಳ ಮೂಲಕ ವಿದ್ಯಾರ್ಥಿಗಳಿಗೆ ವಂಚಿಸಲಾಗುತ್ತಿದೆ. ಇದೇ ಕಾರಣಕ್ಕೆ ಕಾಲೇಜುಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಮಾನ್ಯತೆ ಇಲ್ಲದ ಕೋರ್ಸ್ ಗಳ ಸೇರ್ಪಡೆ ಅಥವಾ ಜಾಹಿರಾತು ಬೇಡ ಎಂದು ಎಚ್ಚರಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳು ಅಥವಾ ಕಾಲೇಜುಗಳು ವಿವಿ ಎಚ್ಚರಿಕೆ ಹೊರತಾಗಿಯೂ ಕೋರ್ಸ್ ಗಳ ಸೇರ್ಪಡೆ ಮಾಡಿಕೊಂಡರೆ ಮುಂದಿನ ಪರಿಣಾಮಗಳಿಗೆ ನಾವು ಜವಾಬ್ದಾರರಲ್ಲ ಎಂದು ಎಚ್ಚರಿಕೆ ನೀಡಿರಿರುವುದಾಗಿ ಹೇಳಿದ್ದಾರೆ.
ಬೆಂಗಳೂರು ವಿವಿ ಮೂಲಗಳ ಪ್ರಕಾರ ಹಲವು ಖಾಸಗಿ ಕಾಲೇಜುಗಳು ಮಾನ್ಯತೆ ಇಲ್ಲದ ಹಲವು ಕೋರ್ಸ್ ಗಳನ್ನು ಸೇರ್ಪಡೆ ಮಾಡಿಕೊಂಡಿದ್ದು, ಬಿಬಿಎ (ಏವಿಯೇಷನ್ ಮ್ಯಾನೇಜ್ಮೆಂಟ್), ಬಿಕಾಮ್ (ಅಕೌಂಟಿಂಗ್ & ಫೈನಾನ್ಸ್ ಸ್ಪೆಷಲೈಜೇಷನ್), ಬಿಕಾಮ್ (ಇನ್ಶುರೆನ್ಸ್ ಅಂಡ್ ಆಕ್ಯುರಿಯಲ್ ಸ್ಟಡೀಸ್), ಬಿಕಾಮ್ (ಹಾನರ್ಸ್) ಮತ್ತು ಬಿಕಾಮ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್ ಮ್ಯಾನೇಜ್ಮೆಂಟ್) ಸೇರಿದಂತೆ ಹಲವು ಕೋರ್ಸ್ ಗಳು ವಿವಿ ಮಾನ್ಯತೆ ಪಡೆದಿಲ್ಲ ಎಂದು ತಿಳಿದುಬಂದಿದೆ.