ಮುಷ್ಕರದಿಂದಾಗಿ ಕಂಗಾಲಾಗಿರುವ ಪ್ರಯಾಣಿಕರು
ಬೆಂಗಳೂರು: ಐವರು ಮೆಟ್ರೊ ಸಿಬ್ಬಂದಿ ಬಂಧನ ಖಂಡಿಸಿ ಶುಕ್ರವಾರ ದಿಢೀರ್ ಮುಷ್ಕರ ಆರಂಭಿಸಿದ್ದ ಬಿಎಂಆರ್‍ಸಿಎಲ್ ಸಿಬ್ಬಂದಿ ವಿರುದ್ಧ ಎಸ್ಮಾ ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿದ್ದು, ನಮ್ಮ ಮೆಟ್ರೋ ರೈಲು ಸಂಚಾರ ಪುನಾರಂಭವಾಗಿದೆ.
ಮೆಟ್ರೊ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್) ಪೊಲೀಸರ ನಡುವೆ ನಿನ್ನೆ ಬೆಳಗ್ಗೆ ಮಾರಾಮಾರಿ ನಡೆದಿದ್ದು, ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಖಂಡಿಸಿ ಇಂದು ಬೆಳಗ್ಗೆ ನಮ್ಮ ಮೆಟ್ರೊ ಸಿಬ್ಬಂದಿ ಪ್ರತಿಭಟನೆ ನಡೆಸಿದರ ಪರಿಣಾಮ ಮಧ್ಯಾಹ್ನದ ವರೆಗೆ ಮೆಟ್ರೊ ಸಂಚಾರ ಸ್ಥಗಿತಗೊಂಡಿತ್ತು.
ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರು ನಮ್ಮ ಮೆಟ್ರೊ ಸಿಬ್ಬಂದಿ ಜತೆ ಸಭೆ ನಡೆಸಿ, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ರಾಜ್ಯ ಸರ್ಕಾರ ಸರ್ಕಾರ ಎಸ್ಮಾ ಕಾಯ್ದೆ ಜಾರಿ ಮಾಡುವುದಾಗಿ ಅಧಿಸೂಚನೆ ಹೊರಡಿಸಿದ ನಂತರ ಮುಷ್ಕರ ಹಿಂಪಡೆಯಲಾಗಿದೆ.
ಮೆಟ್ರೊ ರೈಲು ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈಲು ಸಿಬ್ಬಂದಿ ಹಾಗೂ ಅಧಿಕಾರಿಗಳು ಯಾವುದೇ ಮುಷ್ಕರ ನಡೆಸುವಂತಿಲ್ಲ. ಒಂದು ವೇಳೆ ಮುಷ್ಕರ ನಡೆಸಿದರೆ ಅಗತ್ಯ ವಸ್ತುಗಳ ನಿರ್ವಹಣಾ ಕಾಯ್ದೆ 2013(Essential Services Maintenance Act 2013) ಜಾರಿಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದ ನಂತರ ಅಂತಿಮವಾಗಿ ಸುಮಾರು ನಾಲ್ಕು ಗಂಟೆಗಳ ನಂತರ ಪ್ರತಿಭಟನೆ ಹಿಂಪಡೆಯಲಾಗಿದೆ.
ಎಸ್ಮಾ ಜಾರಿಯಾದರೆ ಪ್ರತಿಭಟನೆ ನಡೆಸುವ ನೌಕರರನ್ನು ವಾರೆಂಟ್ ಇಲ್ಲದೆ ಬಂಧಿಸಿ, ಜೈಲಿಗೆ ಕಳುಹಿಸಬಹುದಾಗಿದೆ.