ಬಂಟ್ವಾಳ: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವು ಪ್ರಕರಣದ ಬೆನ್ನಲ್ಲೇ ಬಂಟ್ವಾಳದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳದಲ್ಲಿ 144 ಸೆಕ್ಷನ್ ಮುಂದುವರೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿನ್ನೆ ಶರತ್ ಶವಯಾತ್ರೆ ವೇಳೆ ಬಿಸಿ ರೋಡ್ ನಲ್ಲಿ ನಡೆದ ಕಲ್ಲುತೂರಾಟ ಪ್ರಕರಣ ಮತ್ತು ಅಲ್ಲಲ್ಲಿ ಕೇಳಿಬಂದ ಚೂರಿ ಇರಿತದಂತಹ ಊಹಾಪೋಹಗಳ ಸುದ್ದಿಗಳಿಂದಾಗಿ ಜನತೆ ಕಂಗಾಲಾಗಿದ್ದು, ಇದೇ ಕಾರಣಕ್ಕೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಸುರಕ್ಷತೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಬಂಟ್ವಾಳದಾದ್ಯಂತ ಇಂದೂ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಕೆಎಸ್ ಆರ್ ಪಿ ಮತ್ತು ತುರ್ತು ಪ್ರಹಾರ ದಳ, ಅಶ್ರುವಾಯದಳಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಮಂಗಳೂರಿನ ಹಲವು ಭಾಗಗಳಲ್ಲಿ ಕೆಲ ಅಹಿತಕರ ಘಟನೆಗಳು ವರದಿಯಾಗಿದ್ದು. ಅಲ್ಲಲ್ಲಿ ಕಲ್ಲು ತೂರಾಟದಂತಹ ಪ್ರಕರಣಗಳು ವರದಿಯಾಗಿದೆ. ಅಂತೆಯೇ ಕಲ್ಲು ತೂರಾಟಕ್ಕಾಗಿ ದುಷ್ಕರ್ಮಿಗಳು ಕಲ್ಲು ಸಂಗ್ರಹ ಮಾಡುತ್ತಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೀಘ್ರದಲ್ಲೇ ದುಷ್ಕರ್ಮಿಗಳು ಬಂಧಿಸಿ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಬಿಸಿರೋಡ್ ನಲ್ಲಿ ತುರ್ತು ಸೇವೆಗಳು ಲಭ್ಯವಾಗಿದೆಯಾದರೂ, ಮುಂಜಾಗ್ರತಾ ಕ್ರಮವಾಗಿ ಯಾವುದೇ ಶಾಪಿಂಗ್ ಮಾಲ್ ಗಳು ತೆರೆದಿಲ್ಲ ಎಂದು ತಿಳಿದುಬಂದಿದೆ.