ಹಾವೇರಿ: ಚಲಿಸುತ್ತಿದ್ದ ಬಸ್ ನಲ್ಲಿ ಕರ್ನಾಟಕ ಸರ್ಕಾರಿ ಬಸ್ ಸಿಬ್ಬಂದಿಗಳೇ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಕಳೆದ ಜುಲೈ 5ರಂದೇ ಈ ಘಟನೆ ನಡೆದಿದ್ದು, ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿನಿಂದ ಉಡುಪಿಗೆ ಯುವತಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ವಾಪಸಾಗುತ್ತಿದ್ದ ವೇಳೆ ಬಸ್ ಚಾಲಕರು ಹಾಗೂ ಕಂಡಕ್ಟರ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ನೊಂದ ಯುವತಿ ಆರಂಭದಲ್ಲಿ ಯಾರೊಂದಿಗೂ ಹೇಳಿಕೊಂಡಿರಲಿಲ್ಲವಂತೆ. ಬಳಿಕ ಸ್ನೇಹಿತರು ಧೈರ್ಯ ಹೇಳಿದ್ದು, ಇದೀಗ ಉಡುಪಿ ಜಿಲ್ಲೆಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಪ್ರಕರಣ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣಾಧಿಕಾರಿಗಳು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ಬಂಧಿತ ಕೆಎಸ್ ಆರ್ ಟಿಸಿ ಸಿಬ್ಬಂದಿಗಳ ಮಾಹಿತಿ ಲಭ್ಯವಾಗಿಲ್ಲ.
ಆರೋಪಿ ಸಿಬ್ಬಂದಿಗಳ ಅಮಾನತು ಮಾಡಿದ ಕೆಎಸ್ ಆರ್ ಟಿಸಿ!
ಇದೇ ವೇಳೆ ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಕೆಎಸ್ಆರ್ ಟಿಸಿ ಆರೋಪಿ ಸಿಬ್ಬಂದಿಗಳನ್ನು ಅಮಾನತು ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಪ್ರೀತಿಸಿದ ಹುಡುಗನ ಪೋಷಕರ ಓಲೈಸಲು ರಾಣೆ ಬೆನ್ನೂರಿಗೆ ತೆರಳಿದ್ದ ಯುವತಿ
ಇನ್ನು ಮೂಲಗಳ ಪ್ರಕಾರ ಸಂತ್ರಸ್ಥ ಯುವತಿ ತಾನು ಪ್ರೀತಿಸಿದ ಯುವಕನ ಮದುವೆಯಾಗಲು ಒಪ್ಪದಿದ್ದ ಆತನ ಪೋಷಕರನ್ನು ಓಲೈಕೆ ಮಾಡಲು ರಾಣೆ ಬೆನ್ನೂರಿನ ಹಿರೇಕೆರೂರಿಗೆ ತೆರಳಿದ್ದಳು ಎಂದು ಹೇಳಲಾಗುತ್ತಿದೆ. ಪೋಷಕರ ಓಲೈಕೆ ಸಾಧ್ಯವಾಗದಿದ್ದ ಕಾರಣ ಯುವಕ ರಾತ್ರಿಯೇ ಆಕೆಯನ್ನು ಉಡುಪಿಗೆ ವಾಪಸ್ ಕಳುಹಿಸಿದ್ದನಂತೆ. ಈ ವೇಳೆ ಈ ಕುಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ.