ಮೈಸೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ವಿಐಪಿ ಸೌಲಭ್ಯ ಸಂಬಂಧ ಮಾಜಿ ಬಂಧೀಖಾನೆ ಡಿಜಿಐ ರೂಪಾ ಅವರು ವರದಿ ನೀಡಿದ್ದ ಬೆನ್ನಲ್ಲೇ, ಬೆಳಗಾವಿಯ ಹಿಂಡಲಗಾ ಜೈಲಲ್ಲಿ ವಿಚಾರಣಾಧೀನ ಕೈದಿಗೆ ನಿಯಮ ಉಲ್ಲಂಘಿಸಿ ಪೆರೋಲ್ ಮೇಲೆ ಕಳಿಸಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಗುರಪ್ಪನ ಪಾಳ್ಯದ ಮದರಸಾಬ್ ಲೇಔಟ್ ನಿವಾಸಿ ಕಲೀಮ್ ಪಂಟರ್(35) ವಿರುದ್ಧ ಎರಡು ಕೊಲೆ ಕೇಸುಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆಗೊಳಗಾಗಿದ್ದಾನೆ, ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಮತ್ತೊಂದು ಪ್ರಕರಣದ ತೀರ್ಪು ಬಾಕಿಯಿರುವಾಗದ ಆರೋಪಿಯನ್ನು ಪೆರೋಲ್ ಮೇಲೆ ಕಳುಹಿಸಲು ಕಾನೂನಿನಲ್ಲಿ ಅವಕಾಶವಿಲ್ಲ, ಆದರೆ ಕಲೀಮ್ 1 ತಿಂಗಳ ಕಾಲ ಪೆರೋಲ್ ಮೇಲೆ ತೆರಳಿದ್ದ.
ಮೇ 30 ರಂದು ಪೆರೋಲ್ ಮೇಲೆ ತೆರಳಿದ್ದ ಕಲೀಮ್ ಒಂದು ವಾರದಲ್ಲೇ ವಾಪಸ್ ಬಂದಿದ್ದ. ಇದಕ್ಕಿಂತ ಹೆಚ್ಚಿನ ಆಘಾತಕಾರಿ ವಿಷಯವೆಂದರೇ ಪೆರೋಲ್ ಮೇಲೆ ತೆರಳಿದ್ದ ಆತ 7ಮಂದಿಯೊಡನೆ ಸೇರಿ ಮೈಸೂರಿನ ಗೋಕುಲಂ ಕಚೇರಿಯಲ್ಲಿ ಕಬ್ಬಿಣ ಡಕಾಯಿತಿ ಮಾಡಿದ್ದ. ಆದರೆ ಮೈಸೂರು ಪೊಲೀಸರಿಗೆ ಈ ಪ್ರಕರಣ ಬೇಧಿಸಲಾಗಲಿಲ್ಲ, ನಿಯಮ ಉಲ್ಲಂಘಿಸಿ ಪೆರೋಲ್ ನೀಡಿದ ವಿಷಯ ಬೆಳಕಿಗೆ ಬರಲಿಲ್ಲ.
ಕಲೀಂ ಡಕಾಯಿತಿ ಪ್ರಕರಣದ ಮಾಸ್ಟರ್ ಮೈಂಡ್, ಸಿಬಿಐ ಅಧಿಕಾರಿಗಳಂತೆ ಪೋಸ್ ನೀಡಿ ಸುಮಾರು 30 ಲಕ್ಷ ರು ಮೌಲ್ಯದ ಕಬ್ಬಿಣವನ್ನು ಕಲೀಮ್ ಗ್ಯಾಂಗ್ ಲೂಟಿ ಮಾಡಿದೆ ಎಂದು ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಹೇಳಿದ್ದಾರೆ.
ಕೊಲೆ ಪ್ರಕರಣದ ವಿಚಾರಣೆ ಬಾಕಿ ಉಳಿದಿರುವಾಗ ಆತ ಹೇಗೆ ಪೆರೋಲ್ ಪಡೆದ ಎಂದು ನಿವೃತ್ತ ಐಪಿಎಸ್ ಅಧಿಕಾರಿ. ಬಿ.ಬಿ ಅಶೋಕ್ ಕುಮಾರ್ ಪ್ರಶ್ವನಿಸಿದ್ದಾರೆ. ಜೀವಾವಧಿ ಶಿಕ್ಷೆಗೊಳಗಾಗಿರುವ ಕೈದಿಯ ಸನ್ನಡತೆ ನೋಡಿ ಪೆರೋಲ್ ಮೇಲೆ ಕಳುಹಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕಲೀಮ ವಿರುದ್ಧದ ಒಂದು ಕೇಸ್ ಮಾತ್ರ ಇತ್ಯರ್ಥಗೊಂಡಿದ್ದು, ಮತ್ತೊಂದು ಪ್ರಕರಣ ಬಾಕಿಯಿದೆ.
ಪೆರೋಲ್ ಮೇಲೆ ಹೊರಬಂದಿದ್ದ ಕಲೀಂ ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಪೆರೋಲ್ ಪಡೆದ ಪ್ರತಿ ಕೈದಿಯು ಆತ ವಾಸಿಸುತ್ತಿರುವ ಐರಿಯಾದ ಪೊಲೀಸ್ ಠಾಣೆಯಲ್ಲಿ, ದಿನನಿತ್ಯ ಬಂದು ಸಹಿ ಮಾಡಬೇಕೆಂಬ ನಿಯಮವಿದೆ. ಹಲವು ಕೈದಿಗಳು ಪೆರೋಲ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ, ಅಧಿಕಾರಿಗಳು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಅವರು ಅಶೋಕ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics