ರಾಜ್ಯ

ಕರ್ನಾಟಕ ಧ್ವಜ ವಿವಾದ ಕಾನೂನನ್ನು ಅವಲಂಬಿಸಿದೆ: ಆಸ್ಕರ್ ಫೆರ್ನಾಂಡಿಸ್

Sumana Upadhyaya
ನವದೆಹಲಿ: ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕೆಂದು ಒತ್ತಾಯಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡೀಸ್, ಈ ವಿವಾದ ಕಾನೂನನ್ನು ಅವಲಂಬಿಸಿದೆ ಎಂದು ಹೇಳುತ್ತಾರೆ.
ಜನರು ಸುಮ್ಮನೆ ವಿವಾದವನ್ನು ಎಬ್ಬಿಸುತ್ತಾರೆ. ಅದು ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ಕೂಡ ಯೋಚಿಸುವುದಿಲ್ಲ. ಅದು ಕಾನೂನುಬದ್ಧವಾಗಿದ್ದರೆ ಪ್ರತಿಭಟನೆ ಮಾಡಬೇಕು. ಇಲ್ಲದಿದ್ದರೆ ಮಾಡಬಾರದು ಎಂದು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದಕ್ಕೂ ಮುನ್ನ ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ ನವರು ಸಂವಿಧಾನದಲ್ಲಿ ಅಸ್ತಿತ್ವದಲ್ಲಿಲ್ಲದ ಷರತ್ತುಗಳನ್ನು ಉಲ್ಲೇಖಿಸುತ್ತಿದ್ದಾರೆ. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಯಾವ ರೀತಿಯಿಂದಲೂ ಭಾರತದ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿದಂತಾಗುವುದಿಲ್ಲ ಎಂದು ಹೇಳಿದ್ದಾರೆ.
ನಾವು ರಾಷ್ಟ್ರಧ್ವಜಕ್ಕೆ ಎಂದಿನಂತೆಯೇ ಗೌರವ ನೀಡುತ್ತೇವೆ. ದೇಶದ ಸಂವಿಧಾನದಲ್ಲಿ ಯಾವತ್ತಿಗೂ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಇರಬೇಕು ಅಥವಾ ಇರಬಾರದೆಂದು ಹೇಳಿಲ್ಲ. ಹಾಗಿರುವಾಗ ಬಿಜೆಪಿ ಮತ್ತು ಜೆಡಿಎಸ್ ಅಸ್ಥಿತ್ವದಲ್ಲಿಲ್ಲದ ಷರತ್ತುಗಳನ್ನು ಏಕೆ ಉಲ್ಲೇಖಿಸುತ್ತದೆ? ಜೂನ್ 6ರಂದು ಇದಕ್ಕಾಗಿ ಸಮಿತಿ ರಚಿಸಲು ನಿರ್ಧರಿಸಿದೆವು. ಇದರ ಹಿಂದೆ ರಾಜಕೀಯ ಉದ್ದೇಶವಿಲ್ಲ. ರಾಷ್ಟ್ರಧ್ವಜ ನಮಗೆ ಯಾವತ್ತಿಗೂ ಮೇಲೆಯೇ ಎಂದು ಹೇಳಿದ್ದರು.
ಈ ಮಧ್ಯೆ ರಾಜ್ಯ ಸರ್ಕಾರ 9 ಸದಸ್ಯರ ಸಮಿತಿ ರಚಿಸಿದ್ದು, ರಾಜ್ಯಕ್ಕೆ ಪ್ರತ್ಯೇಕ ಧ್ವಜ ವಿನ್ಯಾಸದ ಸಾಧ್ಯತೆ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
SCROLL FOR NEXT