ಮೈಸೂರು: ಇದು ಕಾಲ್ಪನಿಕ ಮದುವೆ ಕಥೆಯಂತೆ ನಿಮಗೆ ಕೇಳಿಸಬಹುದು.ಆದರೂ ಇದು ನಡೆಯುತ್ತಿರುವುದು ಸತ್ಯ. ಚಾಮರಾಜ ನಗರ ಜಿಲ್ಲೆಯ ನದಿ ದಡದ ಹತ್ತಿರ ಮಧ್ಯರಾತ್ರಿಯಲ್ಲಿ ಸಣ್ಣ ದೇವಾಲಯದಲ್ಲಿ ಆ ಜೋಡಿಗಳು ಮದುವೆಯಾಗುತ್ತಾರೆ. ಆದರೆ ಅವೆಲ್ಲವೂ ಬಾಲ್ಯ ವಿವಾಹ ಅನ್ನುವುದು ಮಾತ್ರ ಖೇದನೀಯ ಸಂಗತಿ.
ಅಧಿಕಾರಿಗಳನ್ನು ವಂಚಿಸಿ ಪೋಷಕರು ಮತ್ತು ಎರಡು ಸಮುದಾಯದವರು ಕತ್ತಲೆಯಲ್ಲಿ ಇಂತಹ ಮದುವೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಹೀಗೆ 200ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ಸದ್ದಿಲ್ಲದೆ ನಡೆದಿವೆ. ತೀವ್ರ ರಹಸ್ಯದಿಂದ ಈ ಮದುವೆಗಳು ನಡೆಯುವುದರಿಂದ ಬಹಿರಂಗವಾಗುವುದಿಲ್ಲ ಎಂದು ಮಕ್ಕಳ ಮತ್ತು ಮಹಿಳೆಯರ ಮೇಲಿನ ಶಾಸಕಾಂಗ ಸಮಿತಿಯ ವರದಿ ಹೇಳುತ್ತದೆ ಎನ್ನುತ್ತಾರೆ ಚಾಮರಾಜನಗರ ಉಸ್ತುವಾರಿ ಜಿಲ್ಲಾಧಿಕಾರಿ ಡಿ.ಸಿ.ಹರೀಶ್ ಕುಮಾರ್.
ಚಾಮರಾಜನಗರ ಜಿಲ್ಲೆಯ ಎರಡು ಸಮುದಾಯಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿದೆ. 18 ವರ್ಷವಾದ ನಂತರ ತಮ್ಮ ಮಗಳಿಗೆ ಗಂಡು ಹುಡುಕುವುದು ಕಷ್ಟ ಎಂದು ಬಾಲ್ಯದಲ್ಲಿಯೇ ಪೋಷಕರು ಮದುವೆ ಮಾಡಿಸಿ ಬಿಡುತ್ತಾರೆ. ಈ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಹಲವು ಪ್ರಯತ್ನಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹರೀಶ್ ಕುಮಾರ್.
ಸಾಮಾನ್ಯವಾಗಿ ಇಂತಹ ಬಾಲ್ಯ ವಿವಾಹಗಳು ಮಧ್ಯರಾತ್ರಿ ಹೊತ್ತು ಸಣ್ಣ ದೇವಾಲಯಗಳಲ್ಲಿ ನಡೆಯುತ್ತವೆ. ಬಾಲಕ, ಬಾಲಕಿಯ ಪೋಷಕರ ಸಮ್ಮುಖದಲ್ಲಿ ನಡೆಯುವ ಮದುವೆಯ ಕರೆಯೋಲೆ ಪತ್ರ ಮುದ್ರಿಸುವುದಿಲ್ಲ. ಒಂದು ವೇಳೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿ ಅವರು ಸ್ಥಳಕ್ಕೆ ಧಾವಿಸುವ ಹೊತ್ತಿಗೆ ಮದುವೆ ಮುಗಿದುಹೋಗಿರುತ್ತದೆ.
2016-17ನೇ ಸಾಲಿನಲ್ಲಿ ಮೈಸೂರಿನಲ್ಲಿ ಕೇವಲ ಒಂದು ಬಾಲ್ಯ ವಿವಾಹವಾದ ಬಗ್ಗೆ ಎಫ್ಐಆರ್ ದಾಖಲಾಗಿದೆಯಷ್ಟೆ. ಅದಕ್ಕಿಂತ ಹಿಂದಿನ ವರ್ಷ ಪ್ರಕರಣ ದಾಖಲಾಗಿಲ್ಲ. ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಹೂಡ, ಚಾಮರಾಜನಗರಕ್ಕಿಂತ ಇಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ.ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಅಧಿಕಾರಿಗಳು ಜಾಗೃತಿ ಮೂಡಿಸಲು ಹೆಚ್ಚಿನ ಗಮನ ಹರಿಸಬೇಕೆಂದು ಹೇಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos