ಸರ್ಕಾರಿ ಶಾಲೆಯಲ್ಲಿ ನಿರ್ಮಾಣದ ಅವಶೇಷಗಳು
ಬೆಂಗಳೂರು: ನಗರದ ಅನೇಕ ಸರ್ಕಾರಿ ಶಾಲೆಗಳು ವಿದ್ಯಾ ದೇಗುಲವಾಗಿ ಉಳಿಯದೆ ಕಸ, ಮಣ್ಣು, ಬೇಡದ ವಸ್ತುಗಳನ್ನು ತಂದು ರಾಶಿ ಹಾಕುವ ಜಾಗವಾಗಿದೆ.
ರಾಮಗೊಂಡನಹಳ್ಳಿಯ ಸರ್ಕಾರಿ ಶಾಲೆಯೊಂದರ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಳೆದ ಮೂರು ವರ್ಷಗಳಿಂದ ರಾತ್ರಿ ಹೊತ್ತು ಹಾನಿ ಮಾಡುತ್ತಿದ್ದಾರೆ. ಅಕ್ಕಪಕ್ಕದ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಕಸ,ಮಣ್ಣಿನ ರಾಶಿಗಳನ್ನು ರಾತ್ರಿ ಹೊತ್ತಿನಲ್ಲಿ ಶಾಲೆಯ ಆವರಣದ ಪಕ್ಕ ತಂದು ಹಾಕುತ್ತಿದ್ದಾರೆ. ಅದಕ್ಕೆ ಹೊರತಾಗಿ, ಶಾಲೆಯ ಆವರಣವನ್ನು ಕಾಲಕಾಲಕ್ಕೆ ಸ್ವಚ್ಥ ಮಾಡದಿರುವುದರಿಂದ ಸಸ್ಯಗಳು ಮಿತಿಮೀರಿ ಬೆಳೆದು ಹಾವು ಕೂಡ ಬರಲು ಆರಂಭಿಸಿದೆ.
ಶಾಲೆಯ ಮುಖ್ಯೋಪಾಧ್ಯಾಯ ಆರ್. ಕೃಷ್ಣಪ್ಪ, ಕೆಲವರು ರಾತ್ರಿ ಹೊತ್ತಿನಲ್ಲಿ ಬಂದು ಮದ್ಯಪಾನ ಮಾಡಿ ಬಾಟಲ್ ಗಳನ್ನು ಒಡೆದು ಇಲ್ಲಿ ಎಸೆದು ಹೋಗುತ್ತಾರೆ. ಶಾಲೆಯ ಗೋಡೆಗಳ ಮೇಲೆ ಕೆಟ್ಟದಾಗಿ ಬರೆದು, ಚಿತ್ರಿಸಿ ಹಾಳು ಮಾಡಿ ಹೋಗುತ್ತಾರೆ ಎನ್ನುತ್ತಾರೆ.
ಕಳೆದ ವರ್ಷ ವರ್ತೂರು ಪೊಲೀಸ್ ಠಾಣೆಯಲ್ಲಿ ಶಾಲೆ ದೂರು ದಾಖಲಿಸಿತ್ತು. ಅದಕ್ಕೆ ಹೊಯ್ಸಳ ಪೊಲೀಸರು ರಾತ್ರಿ ಹೊತ್ತು ಸ್ವಲ್ಪ ಸಮಯ ಗಸ್ತು ತಿರುಗಿದರು. ಆದರೆ ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.
ಕಳೆದ ತಿಂಗಳು ಶಾಲೆಯ ಮೈದಾನದಲ್ಲಿ 6 ಬಾರಿ ಹಾವುಗಳು ಸಿಕ್ಕಿವೆ. ಈ ಬಗ್ಗೆ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಕಳೆದ ವಾರ ಬಿಬಿಎಂಪಿಗೆ ದೂರು ಸಲ್ಲಿಸಿದ್ದರು. ಹಾವು ಯಾರಿಗಾದರೂ ಮಕ್ಕಳಿಗೆ ಕಚ್ಚಿದರೆ ಯಾರು ಜವಾಬ್ದಾರರು ಎಂದು ಕೇಳುತ್ತಾರೆ ಮುಖ್ಯೋಪಾಧ್ಯಾಯರು. ಏಳನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಒಟ್ಟು 235 ಮಕ್ಕಳಿದ್ದಾರೆ. ಇವರಲ್ಲಿ ಬಹುತೇಕ ಮಕ್ಕಳು ಆರ್ಥಿಕವಾಗಿ ದುರ್ಬಲ ಕುಟುಂಬದಿಂದ ಬಂದವರಾಗಿದ್ದಾರೆ.
ಶಾಲೆಗೆ ಕಂಪೌಂಡ್ ಗೋಡೆ ಸರಿಯಾಗಿ ಇಲ್ಲದಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣ ಎನ್ನುತ್ತಾರೆ ವೈಟ್ ಫೀಲ್ಡ್ ರೈಸಿಂಗ್ ಸಂಸ್ಥೆಯ ಸದಸ್ಯರು. ಶಾಲೆಯ ನಿರ್ವಹಣೆಗೆ ಸರ್ಕಾರದಿಂದ ವರ್ಷಕ್ಕೆ 12,000 ರೂಪಾಯಿ ಸಿಗುತ್ತದೆ. ಅದರಲ್ಲಿ ವಿದ್ಯುತ್ ಮತ್ತು ನೀರಿನ ಬಿಲ್ ಕೂಡ ಸೇರಿದೆ.